ADVERTISEMENT

ಪರಿಹಾರ ತಾರತಮ್ಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 10:00 IST
Last Updated 16 ಸೆಪ್ಟೆಂಬರ್ 2011, 10:00 IST

ಗುಬ್ಬಿ: ಪೆಟ್ರೋಲಿಯಂ ಮತ್ತು ಖನಿಜಗಳ ಕೊಳವೆ ಮಾರ್ಗ ನಿರ್ಮಿ ಸುತ್ತಿರುವ ಗೇಲ್ ಕಂಪೆನಿ ಭೂಸ್ವಾಧೀನ ಸಂದರ್ಭದಲ್ಲಿ ಹಾನಿಯಾದ ವಾಣಿಜ್ಯ ಬೆಳೆಗೆ ನೀಡುವ ಪರಿಹಾರದಲ್ಲಿ ಅನ್ಯಾಯವೆಸಗಿದೆ ಎಂದು ಆರೋಪಿಸಿ ತಾಲ್ಲೂಕಿನ ಕಗ್ಗೆರೆ ಗ್ರಾಮಸ್ಥರು ಗುರುವಾರ ಕೆಲಕಾಲ ಪೈಪ್‌ಲೈನ್ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಭೂಸ್ವಾಧೀನ ಸಂದರ್ಭ ಅಳತೆ ನಡೆಸಿದ ಕಂಪೆನಿ ರೈತರಿಗೆ ಸಂಬಂಧಿಸಿದ ವಾಣಿಜ್ಯ ಬೆಳೆ ಹಾಗೂ ಮರವಳಿಗಳ ಪಟ್ಟಿ ತಯಾರಿಸಿ ಸರ್ಕಾರ ನಿಗದಿ ಪಡಿಸಿದ ಪರಿಹಾರ ನೀಡುತ್ತಿದೆ. ಕಗ್ಗೆರೆ ಭಾಗದ ರೈತರಿಗೆ ಈ ಪರಿಹಾರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿ ಸಿದೆ. ರೈತರಿಗೆ ಸಲ್ಲಬೇಕಾದ ನ್ಯಾಯೋಜಿತ ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಮರಗಳ ವಯಸ್ಸು ಗುರುತಿಸಿ ಬೆಲೆ ನಿಗದಿಪಡಿಸಿ ರೈತರ ಸಮ್ಮುಖದಲ್ಲಿ ಪಂಚನಾಮೆ ತಯಾರಿಸಿದ ನಂತರ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳೀಯ ಮಧ್ಯವರ್ತಿಗಳನ್ನು ಬಳಸಿ ಕೊಂಡು ರೈತರಿಗೆ ಹೆಚ್ಚಿನ ಹಣ ಬರುವ ರೀತಿ ಮಾಡುವುದಾಗಿ ಹೆಚ್ಚಿನ ವಾಣಿಜ್ಯ ಮರಗಳಿರುವುದಾಗಿ ನಮೂದಿಸಿ ಹಲವು ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ಸ್ಥಳೀಯ ಮುಖಂಡ ಕೆ.ಎನ್.ಬಸವರಾಜು ಆರೋಪಿಸಿದರು.

ಫಲ ನೀಡುವ ತೆಂಗು, ಅಡಿಕೆ, ಬಾಳೆ ಇನ್ನತರ ಬೆಳೆ ಕಳೆದುಕೊಂಡ ರೈತರ ಸ್ಥಿತಿ ಭೂಸ್ವಾಧೀನದ ನಂತರ ಹೇಳ ತೀರದಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡಲೇಬೇಕು ಎಂದು ಪೈಪ್‌ಲೈನ್ ಕಾಮಗಾರಿಯಲ್ಲಿ ತೊಡಗಿದ್ದ ಜೆಸಿಬಿ ಯಂತ್ರಗಳಿಗೆ ತಡೆಯೊಡ್ಡಿದ್ದರು. ಸ್ಥಳಕ್ಕೆ ಆಗಮಿಸಿದ ಕಂಪೆನಿ ಅಧಿಕಾರಿ, ಬೆಳೆಗೆ ಸರಿಯಾಗಿ ಪರಿಹಾರ ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.