ADVERTISEMENT

‘ಪೌಷ್ಟಿಕ ಪೂರ್ಣ ತುಮಕೂರು’ ಜಾರಿ

ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರಲ್ಲಿ ಪೌಷ್ಟಿಕ ಮಟ್ಟ ವೃದ್ಧಿಗೆ ರೂಪಿಸಿರುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 7:14 IST
Last Updated 9 ಜೂನ್ 2018, 7:14 IST

‌ತುಮಕೂರು: 'ಗ್ರಾಮೀಣ ಪ್ರದೇಶದ ಗರ್ಭಿಣಿಯರು, ಬಾಣಂತಿಯರು ಹಾಗೂ 0–6 ವರ್ಷದ ಮಕ್ಕಳು ಹಾಗೂ 11–18 ವರ್ಷದೊಳಗಿನ ಕಿಶೋರಿಯರಲ್ಲಿ ಪೌಷ್ಟಿಕ ಮಟ್ಟ ವೃದ್ಧಿಗೆ ಪೂರಕ ಆಹಾರ ಒದಗಿಸುವುದು ‘ಪೌಷ್ಟಿಕ ಪೂರ್ಣ’ದ ಉದ್ದೇಶವಾಗಿದೆ' ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಬಾಲಭವನದಲ್ಲಿ ಏರ್ಪಡಿಸಿದ್ದ ‘ಪೌಷ್ಟಿಕ ಪೂರ್ಣ ತುಮಕೂರು’ ಕಾರ್ಯಕ್ರಮ ಹಾಗೂ ಸೆಕ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ಏರ್ಪಡಿಸಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿದರು.

‘ಈ ಯೋಜನೆಯ ಅನುಷ್ಠಾನಕ್ಕಾಗಿ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ), ಸ್ವ ಸಹಾಯ ಸಂಘಗಳ ಸದಸ್ಯರಿಗೆ ವಾರ್ಡ್ ಮತ್ತು ಪಂಚಾಯಿತಿ ಮಟ್ಟದಲ್ಲಿ ತರಬೇತಿ ನೀಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಪ್ರತಿ ತಿಂಗಳಿಗೊಮ್ಮೆ ತಾಯಂದಿರ ಸಭೆ ನಡೆಸಿ ಹೆರಿಗೆ ಪೂರ್ವ ಹಾಗೂ ನಂತರದ ಆರೈಕೆ, ಮಗು ಜನಿಸಿದ 6 ತಿಂಗಳ ಕಾಲ ಎದೆಹಾಲು ನೀಡುವಿಕೆ, ವಿಟಮಿನ್ ‘ಎ’ ಮಾತ್ರ ವಿತರಣೆ, ಮಹಿಳೆಯರ ಪೌಷ್ಟಿಕ ಕೈ ತೋಟ ರಚನೆ ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುವುದು’ ಎಂದು ತಿಳಿಸಿದರು.

ಯೋಜನೆ ಅನುಷ್ಠಾನದಲ್ಲಿ ಮುಂದೆ: ‘ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ತುಮಕೂರು ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿದೆ' ಎಂದು ಹೇಳಿದರು.

‘ಜಿಲ್ಲೆಯಲ್ಲಿನ ಮಹಿಳೆ ಮತ್ತು ಮಕ್ಕಳಲ್ಲಿ ಕಂಡು ಬರುವ ಅಪೌಷ್ಟಿಕತೆ ಹಾಗೂ ರಕ್ತ ಹೀನತೆ ಕಡಿಮೆ ಮಾಡಲು ವಿವಿಧ ಇಲಾಖೆಗಳು ಜಂಟಿಯಾಗಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಮಾಡಿವೆ. ಶೇ 80ರಷ್ಟು ಯಶಸ್ಸು ಕಂಡಿವೆ’ ಎಂದು ತಿಳಿಸಿದರು.

‘ಆರೋಗ್ಯ ಇಲಾಖೆಯಿಂದ ನೀಡಲಾಗುವ ವಿವಿಧ ಲಸಿಕಾ ಕಾರ್ಯಕ್ರಮದಲ್ಲಿ ಶೇ 100ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗುರಿಯನ್ನು ಸಾಧಿಸಲಾಗಿದೆ’ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮಾತನಾಡಿ, ‘ಮಹಿಳಾ ಸಬಲೀಕರಣಕ್ಕಾಗಿ ಅವರಿಗೆ ಉತ್ತಮ ಆರೋಗ್ಯ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಮನೆ ಮನೆಗೆ ಭೇಟಿ ನೀಡಿ ಅಪೌಷ್ಟಿಕ ಮಹಿಳೆಯರು ಮತ್ತು ಮಕ್ಕಳನ್ನು ಗುರುತಿಸಿ ಅವರ ಸುರಕ್ಷಿತ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತೆಯರ ಕಾರ್ಯ ಪ್ರಶಂಸನೀಯ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ಮಾತನಾಡಿ, ‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆಹಾರ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ದೇಶದಲ್ಲಿನ ಅಪೌಷ್ಟಿಕತೆ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದರು.

‘ಅಪೌಷ್ಟಿಕತೆಯಿಂದ ಮಗು ವಿನಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಜನಿಸಿದ ಮಕ್ಕಳ ಮೆದುಳು ಬೆಳವಣಿಗೆಯಾಗದೇ ಕಲಿಕೆ ಸಾಧ್ಯವಾಗುವುದಿಲ್ಲ. ಜನಿಸಿದ ತಕ್ಷಣ ತಾಯಿ ಮಗುವಿಗೆ ಎದೆಹಾಲು ಉಣಿಸಿದರೆ ಮಗುವಿನ ಸಶಕ್ತ ಬೆಳವಣಿಗೆ ಸಾಧ್ಯವಾಗುತ್ತದೆ’ ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎನ್.ಡಿ.ಪ್ರಕಾಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ವಿ.ರಂಗಸ್ವಾಮಿ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಲೋಗಾನಂದನ್ ಇದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ ಪ್ರಾಸ್ತಾವಿಕ ಮಾತನಾಡಿದರು. ಎಸ್.ನಟರಾಜ್ ನಿರೂಪಿಸಿದರು. ಡಾ.ಕೇಶವರಾಜ್ ವಂದಿಸಿದರು.

ಅಪೌಷ್ಟಿಕತೆಯಲ್ಲಿ 100ನೇ ಸ್ಥಾನ

‘ವಿಶ್ವ ಸಂಸ್ಥೆಯ 2017ರ ಜಾಗತಿಕ ಹಸಿವಿನ ಸೂಚ್ಯಂಕದ ಮಾಹಿತಿ ಪ್ರಕಾರ ಅಪೌಷ್ಟಿಕತೆಯಲ್ಲಿ ಜಗತ್ತಿನ 118 ದೇಶಗಳ ಪೈಕಿ ಭಾರತ 100ನೇ ಸ್ಥಾನದಲ್ಲಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಜಗತ್ತಿನಲ್ಲಿ ಪ್ರತಿ ವರ್ಷ 30 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿವೆ’ ಎಂದು ಬಿ.ಎಲ್.ಜಿನರಾಳ್ಕರ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.