ADVERTISEMENT

ಬೆಂಗಳೂರಿನತ್ತ ಯುವತಿಯರ ನಿತ್ಯ ವಲಸೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2011, 9:45 IST
Last Updated 22 ಆಗಸ್ಟ್ 2011, 9:45 IST
ಬೆಂಗಳೂರಿನತ್ತ ಯುವತಿಯರ ನಿತ್ಯ ವಲಸೆ
ಬೆಂಗಳೂರಿನತ್ತ ಯುವತಿಯರ ನಿತ್ಯ ವಲಸೆ   

ಚಿಕ್ಕತೊಟ್ಲುಕೆರೆ (ತುಮಕೂರು): ಇವರದು ನಿತ್ಯಯಾತ್ರೆ- ನಿತ್ಯ ವಲಸೆ. ಮುಂಜಾನೆ ಸೂರ್ಯ ಹುಟ್ಟುವ ಮೊದಲು ಬೆಂಗಳೂರಿನ ಬಸ್ ಹತ್ತುವ ಈ ಯುವತಿಯರು, ಮನೆಗೆ ಹಿಂದಿರುಗುವ ಹೊತ್ತಿಗೆ ಸೂರ್ಯ ಅಸ್ತಮಿಸಿ ಗಂಟೆಗಳೇ ಕಳೆದು ಹೋಗಿರುತ್ತವೆ. ಮನೆಯ ಅಕ್ಕಪಕ್ಕದ ಗೆಳೆತಿಯರ ಮುಖಗಳನ್ನೇ ಪ್ರತಿದಿನ ನೋಡಲು ಸಾಧ್ಯವಿಲ್ಲ. ಅಷ್ಟೇಕೆ ಮಕ್ಕಳಿಗೆ ಪ್ರೀತಿಯಿಂದ ಊಟ ಮಾಡಿಸಲೂ ಅವಕಾಶ ಸಿಗುವುದಿಲ್ಲ.

ಮಧುಗಿರಿ, ಕೊರಟಗೆರೆ, ತುಮಕೂರು ತಾಲ್ಲೂಕುಗಳ ಹತ್ತಾರು ಗ್ರಾಮಗಳಿಂದ ನೂರಾರು ಯುವತಿಯರು ಪ್ರತಿದಿನ ಬೆಂಗಳೂರಿನ ಪೀಣ್ಯದಲ್ಲಿರುವ ಖಾಸಗಿ ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ತೆರಳುತ್ತಾರೆ. ಮಧುಗಿರಿ ಸಮೀಪದ ಸಂಜೀವಪುರವನ್ನು ಮುಂಜಾನೆ 5.30ಕ್ಕೆ ಬಿಡುವ ಬಸ್ ತಿಮ್ಲಾಪುರ- ಕುರುಮಕೋಟೆ, ಜೋನಿಗರಹಳ್ಳಿ, ಮಣ್ಣನಕುರಿಕೆ, ಬೆಟ್ಟಶಂಭೋನಹಳ್ಳಿ, ಜುಂಜರಾಮನಹಳ್ಳಿ, ಕರಿಕೆರೆ, ಚಿಕ್ಕತೊಟ್ಲುಕೆರೆ, ಯಲ್ಲಾಪುರ, ಬೈಪಾಸ್ ಮತ್ತು ತುಮಕೂರು ನಗರದ  ಬಟವಾಡಿಯಲ್ಲಿ ಇವರನ್ನು ಹತ್ತಿಸಿಕೊಂಡು 9.15ಕ್ಕೆ ಬೆಂಗಳೂರು ತಲುಪುತ್ತದೆ.

ಸಂಜೆ 6ಕ್ಕೆ ಕಾರ್ಖಾನೆ ಬಿಡುವ ಬಸ್ ಇದೇ ಮಾರ್ಗದಲ್ಲಿ ಸಂಚರಿಸಿ ಸಂಜೀವಪುರ ತಲುಪುವ ವೇಳೆಗೆ ರಾತ್ರಿ 10 ಸಮೀಪಿಸಿರುತ್ತದೆ. ಸಂಜೀವಪುರದಲ್ಲಿ ಬೆಳಿಗ್ಗೆ 5.15ಕ್ಕೆ ಮನೆ ಬಿಟ್ಟ ಕಾರ್ಮಿಕ ಮಹಿಳೆ ಮತ್ತೆ ತನ್ನ ಮನೆ ಸೇರುವುದು ರಾತ್ರಿ 10.15ಕ್ಕೆ. ರಾತ್ರಿ ಮನೆ ತಲುಪಿದ ನಂತರವಾದರೂ ಆಕೆಗೆ ನೆಮ್ಮದಿಯ ನಿದ್ದೆ ಇಲ್ಲ.

ಗಂಡ ಅಥವಾ ಅತ್ತೆ ರಾತ್ರಿಯ ಅಡುಗೆ ಮಾಡಿದ್ದರೆ ಸರಿ, ಇಲ್ಲದಿದ್ದರೆ ಅಷ್ಟೊತ್ತಿನಲ್ಲಿ ಅಡುಗೆ ಸಿದ್ಧ ಮಾಡಬೇಕು. ಮುಂಜಾನೆಯ ತಿಂಡಿ- ಮಧ್ಯಾಹ್ನ ಊಟದ ಬಾಕ್ಸ್‌ಗೆ ಸಿದ್ಧತೆ ಪ್ರಾರಂಭವಾಗಬೇಕು. ಅಕ್ಷರಷಃ ನಿದ್ದೆಯಲ್ಲಿದ ರಾತ್ರಿ ಜಾರುವ ಹೊತ್ತಿಗೆ ಮತ್ತೊಂದು ಮುಂಜಾವು ಬಸ್‌ನ ಹಾರ್ನ್ ದನಿಯೊಂದಿಗೆ ಎದುರಾಗಿರುತ್ತದೆ.

`ನಮ್ಮೂರಿಗೆ ಬಸ್ ಬೆಳಿಗ್ಗೆ 7.15ಕ್ಕೆ ಬರುತ್ತದೆ. ನಾನು ಬೆಳಿಗ್ಗೆ 5ಕ್ಕೇ ಎದ್ದು ಮಕ್ಕಳಿಗೆ ಅಡುಗೆ ಮಾಡಿಟ್ಟು, ಬಾಕ್ಸ್‌ಗೆ ಹಾಕಿಕೊಂಡು ಬಸ್‌ಸ್ಟ್ಯಾಂಡ್‌ಗೆ ಓಡುತ್ತೇನೆ. ದೊಡ್ಡ ಬಸ್ ಬಂದರೆ ಕುಳಿತುಕೊಳ್ಳಲು ಸ್ಥಳವಿರುತ್ತದೆ. ಮಿನಿ ಬಸ್ ಬಂದರೆ ಬೆಂಗಳೂರಿನವರೆಗೆ ಸ್ಟ್ಯಾಂಡಿಂಗ್ ಗತಿ. ಮುಂಜಾನೆಯ ತಿಂಡಿ ಬಸ್‌ನಲ್ಲಿಯೇ ಆಗುತ್ತದೆ. ತಿಂಡಿ ತಿಂದು ಎರಡು ಸಲ ತೂಕಡಿಸುವ ಹೊತ್ತಿಗೆ ಫ್ಯಾಕ್ಟರಿ ಬಾಗಿಲಲ್ಲಿ ಇರುತ್ತೇವೆ~ ಎಂದು ತಮ್ಮ ಮುಂಜಾನೆಯ ಬದುಕು ವಿವರಿಸಿದರು ಚಿಕ್ಕತೊಟ್ಲುಕೆರೆ ಗ್ರಾಮದ ನೇತ್ರಾ.

`ಫ್ಯಾಕ್ಟರಿಯಲ್ಲಿ ನಮ್ಮದು ಅವಿರತ ದುಡಿಮೆ. ಮಧ್ಯಾಹ್ನದ ಊಟಕ್ಕೆ ಮುಕ್ಕಾಲು ಗಂಟೆ ವಿರಾಮ ಸಿಗುವುದು ಬಿಟ್ಟರೆ ಇಡಿ ದಿನದಲ್ಲಿ ಒಂದು ನಿಮಿಷವೂ ಪುರುಸೊತ್ತಾಗುವುದಿಲ್ಲ. ಹೈವೇ ಬಿಟ್ಟು ಕೆಳಗಿಳಿದ ಬಸ್ ಹಳ್ಳಕೊಳ್ಳಗಳಲ್ಲಿ ಹಾರಿ- ಜಿಗಿದು ಹಳ್ಳಿಗೆ ಬರುತ್ತದೆ. ಎಷ್ಟೋ ಸಲ ಸೀಟ್ ಸಿಗದೆ, ಕೆಳಗೆ ಕುಳಿತಿರುತ್ತೇವೆ.

ಮನೆ ತಲುಪುವ ಹೊತ್ತಿಗೆ ಮೈಕೈ ನೋಯುತ್ತಿರುತ್ತದೆ. ಹೆತ್ತ ಮಕ್ಕಳನ್ನು ಮುದ್ದಾಡಿ ಪ್ರೀತಿಯಿಂದ ಊಟ ಮಾಡಿಸಲೂ ಅವಕಾಶವಿಲ್ಲದ ಸ್ಥಿತಿ ನಮ್ಮದು~ ಎಂದು ಬೇಸರಿಸುತ್ತಾರೆ ಅವರು.

`ತುಮಕೂರಿನಲ್ಲಿರುವ ಗಾರ್ಮೆಂಟ್ಸ್‌ನಲ್ಲಿಯೇ ಕೆಲಸಗಳು ಸಿಗುತ್ತವೆ. ಆದರೆ ಸಕಾಲಕ್ಕೆ ಬಸ್ ಸೌಲಭ್ಯವಿಲ್ಲ. ತುಮಕೂರು ಫ್ಯಾಕ್ಟರಿಗಳವರು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುವುದಿಲ್ಲ. ಬೆಂಗಳೂರು ಫ್ಯಾಕ್ಟರಿಯವರು ಬಸ್ ಸೌಲಭ್ಯ ಕಲ್ಪಿಸುವುದರಿಂದ ಅನಿವಾರ್ಯವಾಗಿ ಬೆಂಗಳೂರಿಗೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ~ ಎನ್ನುತ್ತಾರೆ ಕರೀಂಬಿ.

ಕೃಷಿ ಕಾರ್ಮಿಕರ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಇರುವ ಹಳ್ಳಿಯಲ್ಲಿಯೇ ಕೆಲಸ ಮಾಡಬಹುದಲ್ಲಾ? ಎಂಬ ಪ್ರಶ್ನೆ ಮುಂದಿಟ್ಟರೆ, ವರ್ಷದಲ್ಲಿ ಎಷ್ಟು ದಿನ ಕೂಲಿ ಕೆಲಸ ಸಿಗಲು ಸಾಧ್ಯ? ಟೈಲರಿಂಗ್ ಕಲಿತು ಹಳ್ಳಿಯಲ್ಲಿ ಕುಳಿತರೆ ನಮ್ಮ ಕಸುಬಿಗೆ ಏನು ಬೆಲೆ ಸಿಕ್ಕಂತಾಯಿತು? ಎಂಬ ಮರು ಪ್ರಶ್ನೆ ಎಸೆಯುತ್ತಾರೆ ನರಸಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.