ADVERTISEMENT

ಬೇಸಿಗೆ ದಾಹ; ಪ್ರತಿ ತಾಲ್ಲೂಕಿಗೆ 85 ಲಕ್ಷ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 6:15 IST
Last Updated 14 ಫೆಬ್ರುವರಿ 2012, 6:15 IST

ತುಮಕೂರು: ತೀವ್ರ ಬರಕ್ಕೆ ಸಿಲುಕಿರುವ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆಗಬಾರದೆಂದು ಸರ್ಕಾರ ಪ್ರತಿ ತಾಲ್ಲೂಕಿಗೆ ರೂ. 85 ಲಕ್ಷ ಹಣ ಬಿಡುಗಡೆ ಮಾಡಿದೆ.

ಮೊದಲ ಹಂತದಲ್ಲಿ ಪ್ರತಿ ತಾಲ್ಲೂಕಿಗೆ ರೂ. 20 ಲಕ್ಷ, ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ರೂ. 25 ಲಕ್ಷದಂತೆ ಜಿಲ್ಲಾಧಿಕಾರಿ ಖಾತೆಗೆ ಹಾಗೂ ಕುಡಿಯುವ ನೀರು ಕಾರ್ಯಪಡೆ ಖಾತೆಗೆ ರೂ. 40 ಲಕ್ಷ ಸೇರಿದಂತೆ ಒಟ್ಟು ರೂ. 85 ಲಕ್ಷ ಬಿಡುಗಡೆ ಮಾಡಿದೆ. ಕುಡಿಯುವ ನೀರಿನ ಕೆಲಸಗಳಿಗೆ, ಕೊಳವೆ ಬಾವಿ ಕೊರೆಸಲು ಹಣದ ಕೊರತೆ ಇಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರಾಜು ಸೋಮವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಹಣದ ಸಮಸ್ಯೆ ಇಲ್ಲ. ಅಧಿಕಾರಿಗಳು ಯುದ್ಧೋಪಾದಿ ಕೆಲಸ ಮಾಡಬೇಕು ಎಂದರು.

ಪ್ರತಿ ಇಲಾಖೆಗೆ ನೀಡಿರುವ ಹಣದಲ್ಲಿ ಮಾರ್ಚ್ ಒಳಗೆ ಶೇ 80ರಷ್ಟು ಹಣ ಖರ್ಚು ಮಾಡದಿದ್ದರೆ ಆಯಾ ಇಲಾಖೆ ಮುಖ್ಯಸ್ಥರನ್ನೇ ಹೊಣೆಗಾರರಾಗಿ ಮಾಡುವುದಾಗಿ ಸರ್ಕಾರ ಆದೇಶಿಸಿದೆ. ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಪಶುಪಾಲನಾ ಇಲಾಖೆ ಅಧಿಕಾರಿ ಮಾತನಾಡಿ, ಸದ್ಯಕ್ಕೆ ಜಿಲ್ಲೆಯಲ್ಲಿ ಮೇವಿನ ಕೊರತೆ ಕಾಣಿಸಿಲ್ಲ. ಪಾವಗಡದ ನಾಗಲಮಡಿಕೆಯಲ್ಲಿ ಶೀಘ್ರ ಗೋಶಾಲೆ ಆರಂಭಿಸುವುದಾಗಿ ತಿಳಿಸಿದರು.

ಗ್ರಾಮಗಳಲ್ಲಿ ಫ್ಲೋರೈಡ್ ಸಹಿತ ಅಶುದ್ಧ ನೀರಿನ ಪೂರೈಕೆ ಎಗ್ಗಿಲ್ಲದೆ ನಡೆಯುತ್ತಿದೆ. ಪ್ರತಿ ಗ್ರಾ.ಪಂ.ಗೆ ಒಬ್ಬರಂತೆ ನೀರು ನೈರ್ಮಲ್ಯ ಸಮಿತಿ ಸಿಬ್ಬಂದಿ ಇದ್ದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕುಡಿಯುವ ನೀರನ್ನು ಪರೀಕ್ಷಿಸಿ ಗುಣಮಟ್ಟ ಕುರಿತು ಜನತೆಗೆ ತಿಳಿಸುತ್ತಿಲ್ಲ ಎಂದು ಪ್ರಭಾರ ಅಧ್ಯಕ್ಷೆ ಲಲಿತಮ್ಮ ಮಂಜುನಾಥ್ ಕಿಡಿಕಾರಿದರು.


60 ಸಾವಿರ ಮನೆ

ಜಿಲ್ಲೆಗೆ ವಿವಿಧ ವಸತಿ ಯೋಜನೆಗಳಡಿ 60 ಸಾವಿರ ಮನೆಗಳು ಮಂಜೂರಾಗಿವೆ. ಆದರೆ ಇಲ್ಲಿವರೆಗೂ ಕೇವಲ 20 ಸಾವಿರ ಮನೆಗಳ ಪಟ್ಟಿಯಷ್ಟೇ ಸಿದ್ಧಗೊಂಡಿದೆ. ಮಾರ್ಚ್ ಒಳಗೆ ಉಳಿದ ಮನೆಗಳ ಪಟ್ಟಿ ಸಿದ್ಧಗೊಳಿಸದಿದ್ದರೆ ವಾಪಸ್ ಆಗಲಿವೆ. ಮನೆ ಕಟ್ಟಿಕೊಳ್ಳಲು ಕೃಷಿ ಭೂಮಿ ಬಳಕೆ ಮಾಡಿಕೊಳ್ಳಲು ಸರ್ಕಾರ ಆದೇಶಿಸಿದೆ. ಆಯಾ ಗ್ರಾ.ಪಂ. ಕಾರ್ಯದರ್ಶಿಗಳು ಅನುಮತಿ ನೀಡಬಹುದಾಗಿದ್ದು ಶೀಘ್ರ ಉಳಿಕೆ ಮನೆಗಳ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಂತೆ ಸೂಚನೆ ನೀಡಲಾಯಿತು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ನಿವೇಶನ ಇದ್ದವರಿಗೂ ಮನೆಗಳನ್ನು ನೀಡಲು ಮುಂದಾಗುತ್ತಿಲ್ಲ. ಬಡವರನ್ನು ಗೋಳು ಹೂಯ್ದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಲಲಿತಮ್ಮ ಎಚ್ಚರಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಈಗಾಗಲೇ ಹಲವು ಸುತ್ತಿನ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಲಾಗಿದೆ. ಈ ಸಲ ರಾಜ್ಯದ ಹತ್ತು ಸ್ಥಾನದೊಳಗೆ ಜಿಲ್ಲೆಯ ಫಲಿತಾಂಶ ತರುವ ನಿರೀಕ್ಷೆಯಿದೆ ಎಂದು ಉಪ ನಿರ್ದೇಶಕ ಮೋಹನ್‌ಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.