ತುಮಕೂರು: ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವಕನೊಬ್ಬನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಸಿದ್ದಗಂಗಾ ಮಠದ ತೋಟದ ಪಂಪ್‌ಹೌಸ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ. ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಮೃತನನ್ನು ಹಿರೇಕೆರೂರು ಕಳಗೊಂಡ ಗ್ರಾಮದ ಚನ್ನಪ್ಪನಾಗೇಂದ್ರಪ್ಪ ಮತ್ತೂರು (36) ಎಂದು ಗುರುತಿಸಲಾಗಿದೆ. ಈತ ಎಂಟನೇ ತರಗತಿಯಿಂದಲೂ ಮಠದಲ್ಲಿ ಓದುತ್ತಿದ್ದು, ಮಠದಲ್ಲಿ ವಾಸವಾಗಿದ್ದರು. ಸಂಸ್ಕೃತದಲ್ಲಿ ಪದವಿವರೆಗೂ ಅಧ್ಯಯನ ನಡೆಸಿದ್ದು, ಮಠಕ್ಕೆ ಸೇರಿರುವ ಸಿದ್ದಗಂಗಾ ಪಾಲಿಟೆಕ್ನಿಕ್‌ನಲ್ಲಿ ಜವಾನರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೊದಲಿನಿಂದಲೂ ಮಠಕ್ಕೆ ಸೇರಿರುವ ತೋಟದ ಪಂಪ್‌ಹೌಸ್‌ನಲ್ಲೇ ಮಲಗುತ್ತಿದ್ದರು. ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಪತ್ನಿಯನ್ನು ಕರೆತರಲು ಬಾಡಿಗೆ ಮನೆಯ ಹುಟುಕಾಟದಲ್ಲಿದ್ದರು ಎನ್ನಲಾಗಿದೆ.
ಮದುಮಗನಾಗಿದ್ದ ಕಾರಣ ಎರಡು ಚಿನ್ನದ ಉಂಗುರ, ಚಿನ್ನದ ಸರ ಧರಿಸಿದ್ದರು ಎನ್ನಲಾಗಿದೆ. ಮೈಮೇಲಿದ್ದ ಒಡವೆ ಕಳವಿಗಾಗಿ ಪರಿಚಯಸ್ಥರೇ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಉತ್ತಮ ನಡತೆ ಹೊಂದಿದ್ದ ಚನ್ನಪ್ಪ ಅವರಿಗೆ ಯಾವುದೇ ದುರುಭ್ಯಾಸ ಇರಲಿಲ್ಲ ಎನ್ನಲಾಗಿದೆ.
ಕೊಲೆ ಮಾಡಿದ ನಂತರ ಮೃತನ ಮೈಮೇಲಿದ್ದ ಸುಮಾರು ರೂ. 50 ಸಾವಿರ ಮೌಲ್ಯದ ಆಭರಣ, ಮೊಬೈಲ್ ಅಪಹರಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಭೇಟಿ ನೀಡಿ ಪರಿಶೀಲಿಸಿದರು. ಮೃತನ ತಮ್ಮ ನಿಜಗುಣಿ ನಾಗೇಂದ್ರಪ್ಪ ಮತ್ತೂರು ದೂರು ನೀಡಿದ್ದಾರೆ. ಕ್ಯಾತ್ಸಂದ್ರ ಸಬ್‌ಇನ್ಸ್‌ಪೆಕ್ಟರ್ ರವಿಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.