ADVERTISEMENT

ಮಳೆ ಮಾಯೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 7:30 IST
Last Updated 2 ಜುಲೈ 2012, 7:30 IST
ಮಳೆ ಮಾಯೆ
ಮಳೆ ಮಾಯೆ   

ಶಿರಾ ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಮುಗಿಯುತ್ತಾ ಬಂದರೂ; ಬಿತ್ತನೆಗೆ ಬೇಕಾದ ಮಳೆ ಮಾತ್ರ ಬಂದಿಲ್ಲ. ಆದರೂ ರೈತಾಪಿ ಜನ ಮಳೆ ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಮಾತು ಮಾತಿಗೂ ಮಳೆಯನ್ನೇ ಜಪಿಸುತ್ತಾ ವಿವಿಧ ಆಚರಣೆಗಳ ಮೊರೆ ಹೋಗುತ್ತಿರುವುದು `ಮಳೆ ಮಾಯೆ~ಗೆ ಸಾಕ್ಷಿಯಾಗಿದೆ.

ಹೌದು, ರೈತರ ಮನೆಯಲ್ಲಿ ಮೊಮ್ಮಗಳು ಅಜ್ಜಿಗೆ, ಅಜ್ಜಿ ಅಚ್ಚಿನ ಕಲ್ಲು ಆಟ ಆಡುತ್ತೇನೆ ಎಂದಾಕ್ಷಣ ಅದಕ್ಕೆ ಅಜ್ಜಿ ಬೇಡಮ್ಮ, ಅಚ್ಚಿನ ಕಲ್ಲು ಆಡಿದರೆ ಮಳೆ ಬರಲ್ಲ ಅಂತಾರೆ..! ಎಂದು ಮುಗಿಲ ಕಡೆಗೆ ದಿಟ್ಟಿಸುತ್ತಾ ಮಳೆ ಧ್ಯಾನದಲ್ಲಿ ಮುಳುಗುತ್ತಾರೆ. ಹಾಗೆ ಸಂಜೆವರೆಗೂ ಮಳೆಗಾಗಿ ಕಾದರೂ; ಬರದಿದ್ದಕ್ಕೆ ಅಜ್ಜಿ ಬೇಸರಿಸಿದರೆ, ಮೊಮ್ಮಗಳು ಅಜ್ಜಿ ಮಳೆ ಬರಲ್ಲ ಅನ್ನಬಾರದು, ಬರುತ್ತೈತೆ ಅಂದರೆ ಮಾತ್ರ ಬರುತ್ತೈತೆ ಅಂತ ನೀನೇ ತಾನೇ ಹೇಳಿದ್ದು? ಅದಕ್ಕೆ ಇನ್ನೊಂದು ಸಲ ಮಳೆ ಬರಲ್ಲ ಅನ್ನಬೇಡ ಎಂದು ಸಣ್ಣಗೆ ಗದರುವುದು ಈಗಲೂ ಜೀವಂತವಾಗಿದೆ.

ಇದು ಮನೆಯಲ್ಲಿ ಮಳೆ ಕುರಿತ ಮಾತುಕತೆಯ ಒಂದು ಪರಿಯಾದರೆ ಮತ್ತೊಂದೆಡೆ ಮಳೆಗಾಗಿ ಜೋಕುಮಾರನ ಆಚರಣೆ, ಮಳೆರಾಯನ ಆಚರಣೆ, ಕತ್ತೆ ಮದುವೆ, ಕಪ್ಪೆ ಮದುವೆಯಂಥ ಜನಪದೀಯ ಆಚರಣೆಗಳ ಮೊರೆ ಹೋಗುತ್ತಿದ್ದಾರೆ.

ತಾಲ್ಲೂಕಿನ ಹುಲಿಕುಂಟೆ ಹೋಬಳಿ ಹೊಸಹಳ್ಳಿಯಲ್ಲಿ ಮಹಿಳೆಯರು ಜೋಕುಮಾರನನ್ನು ತಲೆ ಮೇಲೆ ಹೊತ್ತು ಈಚೆಗೆ ಬೀದಿ ಬೀದಿ ಸಂಚರಿಸಿದರು. ಮಹಿಳೆಯರು ಮನೆ ಮನೆಗೆ ತೆರಳಿ ದವಸಧಾನ್ಯ ಹಾಗೂ ದುಡ್ಡು ಸಂಗ್ರಹಿಸಿದರು. ಮನೆಗೆ ಬಂದ ಜೋಕುಮಾರನನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ಗ್ರಾಮದ ಮಹಿಳೆಯರು ಜೋಕುಮಾರನಿಗೆ ನೀರೆರೆದು ಕೈ ಮುಗಿದು ಮಳೆಗಾಗಿ ಪ್ರಾರ್ಥಿಸಿದರು.

ಹೀಗೆ ಹಲವು ಗ್ರಾಮಗಳಲ್ಲಿ ಸುತ್ತಾಡಿದ ಮಹಿಳೆಯರು ಮೂರು ದಿನ ಜೋಕುಮಾರನಿಗೆ ಪೂಜೆ ಸಲ್ಲಿಸಿ, ಕೊನೆ ದಿನ ಊರಿನ ಕೆರೆಯಂಗಳದಲ್ಲಿ ಸಂಗ್ರಹಣೆಯಾದ ದವಸ-ಧಾನ್ಯ ಸೇರಿಸಿ ಅಡುಗೆ ಮಾಡಿದರು. ಹರಿಸೇವೆ ಎಂದು ಕರೆಯುವ ಈ ಅಡುಗೆಗೆ ಸುತ್ತಮುತ್ತಲ ಗ್ರಾಮದ ಜನರನ್ನು ಆಹ್ವಾನಿಸಿ ಉಣಬಡಿಸಿದರು.

ಇನ್ನೊಂದೆಡೆ ತಾಲ್ಲೂಕಿನ ಬರಗೂರಿನಲ್ಲಿ ಕತ್ತೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿ, ಉಯ್ಯೋ ಉಯ್ಯೋ ಮಳೆರಾಯ ಎಂದು ಮೊರೆ ಇಟ್ಟರು. ಕತ್ತೆಗಳಿಗೆ ಪೂಜೆ ಮಾಡಿದರೆ ವರುಣ ಒಲೆಯುತ್ತಾನೆ ಎಂದು ನಂಬಿರುವ ಗ್ರಾಮೀಣ ಜನ ಅವುಗಳಿಗೆ ಹೊಸ ಬಟ್ಟೆ ತೊಡಿಸಿ, ಬಾಸಿಂಗ ಕಟ್ಟಿ, ಕಂಕಣ, ಅಕ್ಷತೆ, ಗಂಡಿಗೆ ಬಿಡದಿ ಕೊಡುವ ಶಾಸ್ತ್ರ ಸೇರಿದಂತೆ ಮದುವೆ ಕಾರ್ಯಗಳನ್ನು ಗ್ರಾಮಸ್ಥರು ಸಡಗರದಿಂದ ಆಚರಿಸಿದರು. ಸೇರಿದ್ದ ಜನತೆ ಗಾರ್ದಭ ವಧೂ-ವರರಿಗೆ ಶುಭ ಹಾರೈಸಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.