ADVERTISEMENT

ಶೇ 80 ರಷ್ಟು ಜೋಳದ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 10:03 IST
Last Updated 8 ಅಕ್ಟೋಬರ್ 2017, 10:03 IST

ಶಿರಾ: ‘ಕೀಟಗಳ ಬಾಧೆಯಿಂದಾಗಿ ಶೇ 80 ರಷ್ಟು ಜೋಳದ ಬೆಳೆ ನಷ್ಟವಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ನಾಗರಾಜು ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಮಾಹಿತಿ ನೀಡಿದರು. ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದರು.

ಈಗ ಮಳೆ ಬಂದು ಕೀಟಗಳ ಹಾವಳಿಯಿಂದ ಬೆಳೆ ನಷ್ಟವಾಗಿದೆ. ರೈತರಿಗೆ ಪರಿಹಾರ ಕೊಡಿಸುವಂತೆ ಸರ್ಕಾರದ ಗಮನ ಸೆಳೆಯುವಂತೆ ಸಚಿವರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ರಾಮಕೃಷ್ಣ ಮನವಿ ಮಾಡಿದರು.

ಇನ್ ಪುಟ್ ಸಬ್ಸಿಡಿ: ‘ಬೆಳೆ ಪರಿಹಾರವಾಗಿ ನೀಡಿದ ಇನ್ ಪುಟ್ ಸಬ್ಸಿಡಿ ಆಧಾರ್ ಗೊಂದಲದಿಂದಾಗಿ ಹಲವು ರೈತರಿಗೆ ದೊರೆತಿಲ್ಲ. ಬಹಳಷ್ಟು ಹಣ ಜಿಲ್ಲಾಧಿಕಾರಿ ಖಾತೆಯಲ್ಲಿ ಉಳಿದಿದೆ. ಈಗಲೂ ಸಹ ಆರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಮಾಡಿ ಅವರಿಗೆ ಚೆಕ್ ಮೂಲಕ ಹಣ ನೀಡಲು ವ್ಯವಸ್ಥೆ ಮಾಡುವುದಾಗಿ’ ಸಚಿವ ಟಿ.ಬಿ.ಜಯಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಮಾಹಿತಿ ಇಲ್ಲ: ತಾಲ್ಲೂಕಿನಲ್ಲಿ ಬರುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಎಷ್ಟು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ, ಈಗಿನ ಪರಿಸ್ಥಿತಿ ಏನು ಎಂದು ಸಚಿವ ಟಿ.ಬಿ.ಜಯಚಂದ್ರ ಅವರು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಆರ್‌ಡಿ) ಇಲಾಖೆ ಎಂಜಿನಿಯರ್‌ ಗಂಗಾಧರ್ ಅವರನ್ನು ಪ್ರಶ್ನಿಸಿದಾಗ ಮಾಹಿತಿ ನೀಡಲು ತಡಬಡಾಯಿಸಿದರು.

ಕೆರೆಗಳಲ್ಲಿ ಸಂಗ್ರಹವಾಗಿರುವ ನೀರಿನ ಬಗ್ಗೆ ಎಂಜಿನಿಯರ್ ಗಳಿಂದ ಮಾಹಿತಿ ಸಂಗ್ರಹಿಸಿ ಕೊಡುವುದಾಗಿ ಹೇಳಿದಾಗ ಕುಪಿತರಾದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ರಾಮಕೃಷ್ಣ ಹಾಗೂ ಜಯಪ್ರಕಾಶ್ ಅಪರೂಪಕ್ಕೆ ಮಳೆ ಬಂದಿದೆ ಸಾಮಾನ್ಯ ಜನರಿಗೆ ಇರುವ ಕುತೂಹಲ ಸಹ ನಿಮಗೆ ಇಲ್ಲ. ಜನರನ್ನು ಕೇಳಿ ಯಾವ ಕೆರೆಗೆ ನೀರು ಬಂದಿವೆ ಎಂದು ಹೇಳುತ್ತಾರೆ. ಮಾಹಿತಿ ಇಲ್ಲದ ಮೇಲೆ ಸಭೆಗೆ ಏಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಸಣ್ಣ ನೀರಾವರಿ ಇಲಾಖೆ 62 ಕೆರೆಗಳಲ್ಲಿ ಬುಕ್ಕಾಪಟ್ಟಣ ಕೆರೆ ಭರ್ತಿಯಾಗಿದ್ದರೆ ಉಳಿದಂತೆ 5 ಕೆರೆಗಳು ಶೇ 25 ರಷ್ಟು, 8 ಕೆರೆಗಳಿಗೆ ಶೇ 40 ರಷ್ಟು ನೀರು ಬಂದಿದೆ. ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ಉಪಾಧ್ಯಕ್ಷ ರಂಗನಾಥ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಂಬುಜಾ
ಎಸ್.ಆರ್.ಗೌಡ, ಗಿರಿಜಮ್ಮ ಶ್ರೀರಂಗಯಾದವ್, ಬೊಮ್ಮಣ್ಣ, ತಹಶೀಲ್ದಾರ್ ಆರ್.ಗಂಗೇಶ್, ಮಹಮದ್ ಮುಬೀನ್, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.