ADVERTISEMENT

ಹೇಮಾವತಿ ನೀರು ಒದಗಿಸಲು ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 9:56 IST
Last Updated 21 ಡಿಸೆಂಬರ್ 2012, 9:56 IST
ತುಮಕೂರು: ನಗರದ ಸಿದ್ದರಾಮೇಶ್ವರ ಬಡಾವಣೆ, ಮಾರುತಿನಗರ, ಟುಡಾ ಬಡಾವಣೆ, ಮಂಜುನಾಥನಗರ, ಗೋಕುಲ ಬಡಾವಣೆ, ಮಹಾಲಕ್ಷ್ಮೀ ಬಡಾವಣೆಗೆ ಶೀಘ್ರ ಹೇಮಾವತಿ ನೀರು ಒದಗಿಸುವಂತೆ ಆಗ್ರಹಿಸಿ ಗುರುವಾರ ನಗರಸಭೆ ಎದುರು ಪ್ರತಿಭಟನೆ ನಡೆಸಲಾಯಿತು.
ಸಿದ್ದರಾಮೇಶ್ವರ ಬಡಾವಣೆ ನಿವಾಸಿಗಳ ಕ್ಷೇಮಾಭ್ಯುದಯ ಸಂಘದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನಮ್ಮ ಬಡಾವಣೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಮೂಲಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ ಎಂದು ನಗರಸಭೆ ಆಯುಕ್ತ ನಾರಾಯಣಪ್ಪ ಅವರನ್ನು ಧರಣಿ ನಿರತರು ತರಾಟೆಗೆ ತೆಗೆದುಕೊಂಡರು. ಹೇಮಾವತಿ ನೀರನ್ನು ಶೀಘ್ರ ಸರಬರಾಜು ಮಾಡಬೇಕು, ರಸ್ತೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಎಂಜಿನಿಯರ್ ಪ್ರಕಾಶ್ ಅವರನ್ನು ಸಹ ತರಾಟೆಗೆ ತೆಗೆದುಕೊಂಡರು.
ಮಹಾಲಕ್ಷ್ಮೀ ಬಡಾವಣೆಯ 80 ಅಡಿ ರಸ್ತೆ ವಿಸ್ತರಿಸಿ, ಡಾಂಬರೀಕರಣ ಮಾಡುವಂತೆ ಆಗ್ರಹಿಸಿದರು. ಈ ರಸ್ತೆ ದುರಸ್ತಿ ಮಾಡದೆ ನಿತ್ಯವೂ ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಳಚರಂಡಿ ಸೌಲಭ್ಯ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ನಾಯಿ, ಹಂದಿಗಳ ಹಾವಳಿ ಹೆಚ್ಚಾಗುತ್ತಿದ್ದು ಅನಾಹುತ ಸಂಭವಿಸುವ ಮುನ್ನ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ ಎಂದು ನಿವಾಸಿ ಸಂಪತ್‌ಕುಮಾರ್ ಆರೋಪಿಸಿದರು. ನಗರಸಭೆ 35ನೇ ವಾರ್ಡ್ ಸದಸ್ಯ ಮುನಿಯಪ್ಪ, ಸಂಘದ ಪದಾಧಿಕಾರಿಗಳಾದ ಸಿದ್ದರಾಜು, ಚಂದ್ರಕುಮಾರ್, ಎ.ಎಸ್.ಮಲ್ಲಿಕಾರ್ಜುನಯ್ಯ, ದಯಾನಂದ ಇತರರು ನೇತೃತ್ವ ವಹಿಸಿದ್ದರು.

ಅಧಿಕಾರಿಗಳ ಜತೆ ಬಡಾವಣೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ನಗರಸಭೆ ಆಯುಕ್ತ ನಾರಾಯಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಅಹಮದ್ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.