ADVERTISEMENT

ಬಿಎಸ್‌ಪಿಯಲ್ಲಿ ಪರಿಶಿಷ್ಟರಿಗೆ 100 ಕ್ಷೇತ್ರ

ಈ ತಿಂಗಳ ಕೊನೆಯಲ್ಲಿ ಅಭ್ಯರ್ಥಿಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 15:40 IST
Last Updated 8 ಫೆಬ್ರುವರಿ 2023, 15:40 IST
ತುಮಕೂರಿನಲ್ಲಿ ಬುಧವಾರ ಮಧು ಚಾರಿಟೇಬಲ್ ಟ್ರಸ್ಟ್‌ನ ಎನ್.ಮಧು, ವಕೀಲ ಧನಂಜಯ ಅವರು ಬಿಎಸ್‌ಪಿ ಸೇರ್ಪಡೆಯಾದರು. ಬಿಎಸ್‌ಪಿ ರಾಜ್ಯ ಸಂಯೋಜಕ ಎಂ.ಗೋಪಿನಾಥ್‌, ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎನ್‌.ರಾಜಸಿಂಹ, ಪದಾಧಿಕಾರಿಗಳಾದ ರಂಗಧಾಮಯ್ಯ, ಆರ್‌.ಮುನಿಯಪ್ಪ ಇತರರು ಇದ್ದರು
ತುಮಕೂರಿನಲ್ಲಿ ಬುಧವಾರ ಮಧು ಚಾರಿಟೇಬಲ್ ಟ್ರಸ್ಟ್‌ನ ಎನ್.ಮಧು, ವಕೀಲ ಧನಂಜಯ ಅವರು ಬಿಎಸ್‌ಪಿ ಸೇರ್ಪಡೆಯಾದರು. ಬಿಎಸ್‌ಪಿ ರಾಜ್ಯ ಸಂಯೋಜಕ ಎಂ.ಗೋಪಿನಾಥ್‌, ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎನ್‌.ರಾಜಸಿಂಹ, ಪದಾಧಿಕಾರಿಗಳಾದ ರಂಗಧಾಮಯ್ಯ, ಆರ್‌.ಮುನಿಯಪ್ಪ ಇತರರು ಇದ್ದರು   

ತುಮಕೂರು: ರಾಜ್ಯದ 224 ಕ್ಷೇತ್ರಗಳಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಈ ತಿಂಗಳು ಕೊನೆಯಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಎಂ.ಗೋಪಿನಾಥ್‌ ಇಲ್ಲಿ ಬುಧವಾರ ಹೇಳಿದರು.

100 ಕ್ಷೇತ್ರಗಳಲ್ಲಿ ಒಬಿಸಿ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತರು, 100 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ 24 ಕ್ಷೇತ್ರದಲ್ಲಿ ಪಕ್ಷದ ಸಿದ್ಧಾಂತ ಮತ್ತು ನಾಯಕತ್ವ ಒಪ್ಪಿ ಬರುವ ಮೇಲ್ವರ್ಗದ ಪ್ರಗತಿಪರ‌ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಿಎಸ್‌ಪಿ ಪಕ್ಷ ವೇಗ ಪಡೆದುಕೊಳ್ಳುತ್ತಿದೆ.‌ ಕಳೆದ ಸೆ. 28ರಿಂದ 60 ದಿನಗಳ ಕಾಲ ‘ಜೈ ಭೀಮ್ ಜನ ಜಾಗೃತಿ’ ಜಾಥಾ ಮಾಡಲಾಗಿದೆ. ಇದರಿಂದ ಪಕ್ಷಕ್ಕೆ ಹೊಸ ಶಕ್ತಿ ಸಿಕ್ಕಿದೆ. ಪಕ್ಷ ಸೇರಲು ಬಹಳ ಜನ ಉತ್ಸುಕರಾಗಿದ್ದಾರೆ. ಜಿಲ್ಲೆಯಲ್ಲಿ ಮಧು ಚಾರಿಟೇಬಲ್ ಟ್ರಸ್ಟ್‌ನ ಎನ್.ಮಧು, ವಕೀಲ ಧನಂಜಯ, ಮುಖಂಡರಾದ ಡಾ.ನಟರಾಜು, ಅಶ್ವತ್ಥ ನಾರಾಯಣ ಅವರು ಬಿಎಸ್‌ಪಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ADVERTISEMENT

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎನ್‌.ರಾಜಸಿಂಹ, ‘ಮಧು ಅವರು ಮಧುಗಿರಿ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಕೋವಿಡ್ ಸಮಯದಲ್ಲಿ ಹಲವರಿಗೆ ನೆರವಾಗಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಬಿಎಸ್‌ಪಿ ಸೇರ್ಪಡೆಯಾದ ನಂತರ ಮುಖಂಡ ಎನ್‌.ಮಧು ಮಾತನಾಡಿ,‘ ತಾಲ್ಲೂಕಿನಲ್ಲಿ ಯಾರಿಗೆ ಎಷ್ಟು ಜನಾಭಿಪ್ರಾಯ ಇದೆ ಎನ್ನುವುದು ಚುನಾವಣೆಯ ನಂತರ ತಿಳಿಯಲಿದೆ. ನಾಳೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಜನರ ಪ್ರೀತಿ, ವಿಶ್ವಾಸ ಗೆಲ್ಲುತ್ತೇವೆ’ ಎಂದು ತಿಳಿಸಿದರು.

ಬಿಎಸ್‌ಪಿ ಪದಾಧಿಕಾರಿಗಳಾದ ರಂಗಧಾಮಯ್ಯ, ಆರ್‌.ಮುನಿಯಪ್ಪ, ರಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.