ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ₹1,200 ಕೋಟಿ ಹಂಚಿಕೆಯಾಗಿದೆ. 150 ಮನೆ ಮಂಜೂರಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಶಾಲೆಗಳ ಅಭಿವೃದ್ಧಿಗೆ ₹90 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹78 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ದೊರೆತಿದೆ. ನಿಗದಿತ ಅವಧಿಯಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸಬೇಕು. ಸರ್ಕಾರದಿಂದ ಬಡವರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ. ನಿವೇಶನ, ಮನೆ ಇಲ್ಲದವರನ್ನು ಗುರುತಿಸಿ ಎಂದು ನಿರ್ದೇಶಿಸಿದರು.
ಶಾಸಕ ಸಿ.ಬಿ.ಸುರೇಶ್ ಬಾಬು, ‘ಹೇಮಾವತಿ ನಾಲೆ ಕಾಮಗಾರಿಗೆ ₹150 ಕೋಟಿ ಮಂಜೂರು ಮಾಡಬೇಕು. ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆ ಭರ್ತಿಗೆ ಕ್ರಮಕೈಗೊಳ್ಳಬೇಕು. ದಸೂಡಿ ಭಾಗಕ್ಕೆ ಪಶು ಆಸ್ಪತ್ರೆ ಮಂಜೂರು ಮಾಡಬೇಕು. ತಾಲ್ಲೂಕಿನಲ್ಲಿ ಕಾಲುಬಾಯಿ ರೋಗಕ್ಕೆ ಸರಿಯಾಗಿ ಔಷಧಿ ಸಿಗುತ್ತಿಲ್ಲ’ ಎಂಬ ವಿಚಾರ ಪ್ರಸ್ತಾಪಿಸಿದರು.
ಕಂದಿಕೆರೆ, ಬೋರನಕಣಿವೆ ಭಾಗಕ್ಕೆ ಹೇಮಾವತಿ ನೀರು ಹರಿಸಲು ಅನುದಾನದ ಕೊರತೆಯಿದೆ. ಹೊಯ್ಸಳಕಟ್ಟೆ ಭಾಗಕ್ಕೆ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ ಅವಶ್ಯಕತೆ ಇದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರಗೌಡ ಇತರರು ಹಾಜರಿದ್ದರು.
‘ಪ್ರಜಾವಾಣಿ’ ವರದಿ ಪ್ರಸ್ತಾಪ
‘ತೆಂಗಿನ ಮರಕ್ಕೆ ಬಿಳಿ ನೊಣ ಕಾಟ ಹೆಚ್ಚಾಗಿದ್ದು ಇಳುವರಿ ಕಡಿಮೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು’ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಒತ್ತಾಯಿಸಿದರು. ‘ತೆಂಗು: ಹೆಚ್ಚಿದ ಬಿಳಿನೊಣ ಬಾಧೆ’ ಶೀರ್ಷಿಕೆಯಡಿ ಮೇ 12ರಂದು ‘ಪ್ರಜಾವಾಣಿ’ ಯಲ್ಲಿ ಪ್ರಕಟವಾದ ವರದಿ ಪ್ರಸ್ತಾಪಿಸಿ ಮಾತನಾಡಿದರು. ‘ಮಳೆ ಬಿರುಸು ಪಡೆದರೆ ಬಿಳಿ ನೊಣಗಳು ಉದುರಿ ಹೋಗುತ್ತವೆ. ರೋಗದ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ತಹಶೀಲ್ದಾರ್ ಸಹಿ ನಕಲು:
ನಕಲಿ ದಾಖಲೆ ಸೃಷ್ಟಿಸಿ ರೈತರ ಜಮೀನು ಮಾರಾಟ ಮಾಡಿ ಅವರನ್ನು ಬೀದಿಗೆ ತರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೆಆರ್‌ಎಸ್ ಮುಖಂಡರು ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು. ‘ಇತ್ತೀಚೆಗೆ ಡಿ–ಗ್ರೂಪ್ ನೌಕರರೊಬ್ಬರು ತಹಶೀಲ್ದಾರ್ ಸಹಿಯನ್ನೇ ನಕಲು ಮಾಡಿ ನಕಲಿ ಮರಣ ಪತ್ರ ಸೃಷ್ಟಿಸಿದ್ದರು. ನೌಕರನನ್ನು ತಾಲ್ಲೂಕು ಆಡಳಿತ ರಕ್ಷಣೆ ಮಾಡುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.