ADVERTISEMENT

ತುಮಕೂರು | 1.26 ಲಕ್ಷ ಹೆಕ್ಟೇರ್ ಬೆಳೆ ನಷ್ಟ: ಹೆಕ್ಟೇರ್‌ಗೆ ₹6,800 ಪರಿಹಾರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:37 IST
Last Updated 25 ನವೆಂಬರ್ 2021, 16:37 IST

ತುಮಕೂರು: ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ 1.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 1.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದ್ದು, ಅದರಲ್ಲಿ 1.17 ಲಕ್ಷ ಹೆಕ್ಟೇರ್ ಬೆಳೆ ಹಾಳಾಗಿದೆ.

ಮಳೆ ಹಾನಿ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಗೆ ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ ಈ ಮಾಹಿತಿ ನೀಡಿದರು. ಮಳೆಯಿಂದ ನೆಲಕ್ಕೆ ಬಿದ್ದು ರಾಗಿ ತೆನೆ ಮೊಳಕೆಯೊಡೆದಿದೆ. ಹಾನಿಗೊಳಗಾಗಿರುವ ರಾಗಿ ಪೈರು ಜಾನುವಾರುಗಳ ಮೇವಿಗೂ ಬಳಸಲು ಯೋಗ್ಯವಾಗಿಲ್ಲ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘ಬೆಳೆ ಹಾನಿಯಾದ ಪ್ರತಿ ಹೆಕ್ಟೇರ್‌ಗೆ ₹6,800 ಪರಿಹಾರ ನೀಡಲಾಗುವುದು. ಜಿಲ್ಲೆಯಲ್ಲಿ 1.59 ಲಕ್ಷ ರೈತರ ಬೆಳೆ ಹಾನಿಗೊಂಡಿದೆ. ಅಕ್ಟೋಬರ್, ನವೆಂಬರ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಶೇ 1700ರಷ್ಟು ಹೆಚ್ಚು ಮಳೆಯಾಗಿದೆ. ನವೆಂಬರ್‌ನಲ್ಲಿ ಸಾಮಾನ್ಯವಾಗಿ 7 ಮಿ.ಮೀ ಆಗಬೇಕಿದ್ದ ಮಳೆ ಪ್ರಮಾಣ ಕಳೆದ 7 ದಿನಗಳಲ್ಲಿ 131 ಮಿ.ಮೀ ಬಿದ್ದಿದೆ. ಇದರಿಂದ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ರಸ್ತೆ, ಕೆರೆ, ಶಾಲಾ ಕಟ್ಟಡಗಳು ಸಹ ಹಾನಿಗೊಳಗಾಗಿವೆ’ ಎಂದು ಹೇಳಿದರು.

ADVERTISEMENT

ಮಳೆಯಿಂದ 622 ಮನೆಗಳಿಗೆ ಹಾನಿಯಾಗಿದ್ದು, ಶೇ 15ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಾನಿಯಾಗಿದ್ದರೆ ಪರಿಹಾರ ನೀಡುವುದಿಲ್ಲ. ಶೇ 15ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಂಡಿದ್ದರೆ ಪರಿಹಾರ ನೀಡಲಾಗುವುದು. ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಮಹಜರು ವರದಿಯನ್ನು ಸಿದ್ಧಪಡಿಸಬೇಕು. ಮನೆ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದರ ನಿಖರ ವರದಿಯನ್ನು ಎಂಜಿನಿಯರುಗಳು ನೀಡಬೇಕು. ಪ್ರಮಾಣ ಪತ್ರ ನೀಡಿದ ನಂತರವಷ್ಟೇ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಸುಳ್ಳು ವರದಿ ನೀಡಿ ಪರಿಹಾರ ಅಪೇಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಹೆಚ್ಚು ನಿಗಾವಹಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಬೆಳೆ, ಮನೆ ಹಾನಿ ವಿವರಗಳನ್ನು 7 ದಿನಗಳ ಒಳಗಾಗಿ ‘ಪರಿಹಾರ’ ಆನ್‍ಲೈನ್ ಪೋರ್ಟಲ್‍ನಲ್ಲಿ ದಾಖಲಿಸಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ಸೂಚಿಸಿದರು.

ಜಿ.ಪಂ ಸಿಇಒ ಕೆ.ವಿದ್ಯಾಕುಮಾರಿ, ಮಳೆಯಿಂದ ದುರಸ್ತಿಗೆ ಬಂದಿರುವ, ಸಂಪೂರ್ಣ ಹಾಳಾಗಿರುವ ಶಾಲಾ ಕಟ್ಟಡಗಳ ಮಾಹಿತಿಯನ್ನು ಶೀಘ್ರ ನೀಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.