ತುಮಕೂರು: ನೊಳಂಬ ಲಿಂಗಾಯತ ಸಂಘದಿಂದ ಜ.14 ಮತ್ತು 15ರಂದು ಎರಡು ದಿನ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಹಿನಿ ಸಭಾಂಗಣದಲ್ಲಿ ಗುರು ಸಿದ್ಧರಾಮೇಶ್ವರರ 852ನೇ ಜಯಂತಿ ಮಹೋತ್ಸವ ನಡೆಯಲಿದೆ.
14ರಂದು ಬೆಳಗ್ಗೆ 11 ಗಂಟೆಗೆ ಕೆರೆಗೋಡಿ– ರಂಗಾಪುರದ ಗುರು ಪರದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ‘ನೊಳಂಬ’ ಸ್ಮರಣ ಸಂಚಿಕೆ, ‘ನೊಳಂಬ ಇತಿಹಾಸ’ ಸಾಕ್ಷ್ಯಚಿತ್ರ, ನೊಳಂಬ ವೆಬ್‌ಸೈಟ್ ಲೋಕಾರ್ಪಣೆಗೊಳ್ಳಲಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಕೆ.ಗೋಪಾಲಯ್ಯ ಇತರರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಾಹಿತ್ಯ ಗೋಷ್ಠಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 7 ಗಂಟೆಗೆ ಶಿವಕುಮಾರ ಕಲಾಸಂಘದಿಂದ ‘ಸಿದ್ಧರಾಮೇಶ್ವರ’ ನಾಟಕ ಪ್ರದರ್ಶಿಸಲಾಗುತ್ತದೆ.
ಜ. 15ರಂದು ಬೆಳಗ್ಗೆ 10.30 ಗಂಟೆಗೆ ಹಮ್ಮಿಕೊಂಡಿರುವ ಮಹಿಳಾ ಮತ್ತು ಕೃಷಿ ಗೋಷ್ಠಿಯನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗ್ರಂಥ ಬಿಡುಗಡೆ ಮಾಡಲಿದ್ದಾರೆ.
‘ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಇತರರು ಭಾಗವಹಿಸಲಿದ್ದಾರೆ’ ಎಂದು ನೊಳಂಬ ಲಿಂಗಾಯತ ಸಂಘದ ಜಿಲ್ಲಾ ಘಟಕದ ನಿರ್ದೇಶಕರಾದ ಗಂಗಾಧರಯ್ಯ ಇಡಕನಹಳ್ಳಿ, ಎಂ.ದಯಾನಂದಸ್ವಾಮ ಮಾದಿಹಳ್ಳಿ, ಎಂ.ದೇವರಾಜು ಮಾಸ್ತಿಗೊಂಡನಹಳ್ಳಿ, ಸುನೀಲ್‌ಕುಮಾರ್ ಇತರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.