ADVERTISEMENT

15 ಸಾವಿರ ಕಾನ್‌ಸ್ಟೆಬಲ್ ಹುದ್ದೆ ನೇಮಕ: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 3:07 IST
Last Updated 4 ಜೂನ್ 2023, 3:07 IST
ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ   

ತುಮಕೂರು: ‘ಶೀಘ್ರವೇ 15 ಸಾವಿರ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾನ್‌ಸ್ಟೆಬಲ್‌ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದ ತನಿಖೆ ಇನ್ನೂ ಮುಂದುವರೆದಿದೆ. 53 ಮಂದಿ ತಪ್ಪಿತಸ್ಥರು ಎಂಬುದು ಕಂಡು ಬಂದಿದೆ. ಆದರೆ, ಮರು ಪರೀಕ್ಷೆ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಾನೂನು ತಜ್ಞರ ಸಲಹೆ ಪಡೆದು ಅರ್ಹರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT
ಜುಲೈನಲ್ಲಿ ಮುಖ್ಯಮಂತ್ರಿ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರಕ್ಕೆ ಹೊರೆ ಎನಿಸಿದ ನಿಗಮ ಮಂಡಳಿ ರದ್ದುಪಡಿಸಲು ಪರಿಶೀಲನೆ ನಡೆದಿದೆ. ಅನಗತ್ಯ ಯೋಜನೆ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗುವುದು.
ಡಾ.ಜಿ.ಪರಮೇಶ್ವರ, ಗೃಹ ಸಚಿವ

‘ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ಎಚ್ಚರಿಕೆಯಿಂದ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಇದನ್ನು ಐದು ವರ್ಷಗಳ ಕಾಲವೂ ಮುಂದುವರೆಸಲಾಗುವುದು. ಈ ಯೋಜನೆಗಳಿಗೆ ಬೇಕಾದ ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಲಾಗಿದೆ. ಎಲ್ಲಾ ಯೋಜನೆಗಳ ಡಿಪಿಆರ್ ಸಿದ್ಧಪಡಿಸುವ ಸಮಯದಲ್ಲಿ ಎಚ್ಚರ ವಹಿಸಬೇಕು. ಅಪವ್ಯಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

‘ಬೆಂಗಳೂರಿನ ಹಾಲು ಒಕ್ಕೂಟದವರು ತಮ್ಮ ಸ್ವಂತ ನಿರ್ಧಾರದಿಂದ ಲೀಟರ್ ಹಾಲಿನ ಬೆಲೆಯನ್ನು ₹1.50 ಕಡಿಮೆ ಮಾಡಿದ್ದಾರೆ. ಆದರೆ ಹಾಲಿನ ಪ್ರೋತ್ಸಾಹ ಧನವನ್ನು ಲೀಟರ್‌ಗೆ ₹7ಕ್ಕೆ ಹೆಚ್ಚಳ ಮಾಡುವ ಉದ್ದೇಶವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.