ADVERTISEMENT

ತುಮಕೂರು: ಗಂಟಲು ದ್ರವ ಸಂಗ್ರಹಕ್ಕೆ 20 ಕೇಂದ್ರ

ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಿ– ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 15:27 IST
Last Updated 29 ಜೂನ್ 2020, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಕೊರೊನಾ ಸೋಂಕು ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಂಟಲು ಮತ್ತು ಮೂಗಿನ ಸ್ರಾವ ಸಂಗ್ರಹಕ್ಕೆ ಜಿಲ್ಲೆಯ 10 ತಾಲ್ಲೂಕುಗಳಲ್ಲಿ 20 ಕೇಂದ್ರಗಳನ್ನು ಆರಂಭಿಸಲಾಗಿದೆ.

ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಇದ್ದರೆ ಅಂತಹ ರೋಗಿಗಳು ಈ ಕೇಂದ್ರಗಳಲ್ಲಿ ಗಂಟಲು ಮತ್ತು ಮೂಗಿನ ಸ್ರಾವದ ಮಾದರಿಯನ್ನು ಪರೀಕ್ಷೆಗೆ ಕೊಡಬಹುದು. ಇಲ್ಲಿ ಉಚಿತವಾಗಿ ಮಾದರಿ ಸಂಗ್ರಹ ಮಾಡಲಾಗುತ್ತದೆ.

ಹೆಚ್ಚಳ– ಎಚ್ಚರಿಕೆ: ಕೊರೊನಾ ಸೋಂಕಿನ ಪ್ರಕರಣಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿಯೇ ಎಚ್ಚರಿಕೆ ನೀಡಿದ್ದು ನಾಗರಿಕರು ಅನಾರೋಗ್ಯದ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು ಎಂದು ಕೋರಿದ್ದಾರೆ.

ADVERTISEMENT

ತುಮಕೂರು, ಪಾವಗಡ, ಶಿರಾದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮುಂದೆ ಮತ್ತಷ್ಟು ಹೆಚ್ಚಳವಾಗುತ್ತವೆ. ಜನರು ಈ ಬಗ್ಗೆ ಎಚ್ಚರವಹಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿನಿಂದ ಇಲ್ಲಿಯವರೆಗೆ ಐದು ಮಂದಿ ಮೃತಪಟ್ಟಿದ್ದಾರೆ. ಈ ಸಾವಿನ ಪ್ರಕರಣಗಳನ್ನು ಅವಲೋಕಿಸಿದಾಗ ಇವರು ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿಯೂ ಸಾವು ಸಂಭವಿಸಿದೆ. ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಕಂಡು ಬಂದ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಬಂದು ಗಂಟಲು ಸ್ರಾವ ಪರೀಕ್ಷೆಗೆ ಒಳಪಡಬೇಕು. ಇದು ಉಚಿತ ಪರೀಕ್ಷೆ ಎಂದಿದ್ದಾರೆ.

ಹೆಚ್ಚುತ್ತಲೆ ಇದೆ ಬಾಕಿ ವರದಿ: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಗಂಟಲು ಸ್ರಾವ ಮತ್ತು ಕಫದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೀಗೆ ಸಂಗ್ರಹಿಸಿರುವ 2,075 ಮಾದರಿಗಳ ವರದಿಗಳು ಇನ್ನೂ ಬಾಕಿ ಇವೆ. ಇವುಗಳಲ್ಲಿಯೂ ಸಾಕಷ್ಟು ಮಾದರಿಗಳಲ್ಲಿ ಸೋಂಕು ದೃಢವಾಗುವ ಸಾಧ್ಯತೆ ಇದೆ. ಈ ಮಾಹಿತಿ ಹಿನ್ನೆಲೆ ಇಟ್ಟುಕೊಂಡೇ ಜಿಲ್ಲಾಧಿಕಾರಿ ಸೋಂಕಿನ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸೋಮವಾರ ಒಂದೇ ದಿನ 450 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ 93 ಮಂದಿಗೆ ಸೋಂಕು ತಗುಲಿದೆ. 39 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. 49 ಸಕ್ರಿಯ ಪ್ರಕರಣಗಳು ಇವೆ. ಗ್ರಾಮೀಣ ಭಾಗಗಳಿಗೂ ಸೋಂಕು ವ್ಯಾಪಿಸಿರುವುದು ಜನರಲ್ಲಿ ಭಯವನ್ನು ತೀವ್ರಗೊಳಿಸಿದೆ.

ಕೋರ್ಟ್‌ ಸೀಲ್‌ಡೌನ್

ಸಹಾಯಕ ಸರ್ಕಾರಿ ಅಭಿಯೋಜಕಿಯೊಬ್ಬರಿಗೆ ಶನಿವಾರ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯವನ್ನು ಸೀಲ್‌ಡೌನ್ ಮಾಡಲಾಗಿದೆ.

ಜೂ. 25ರಂದು ಈ ಅಭಿಯೋಜಕಿಯ ಗಂಟಲು ಸ್ರಾವದ ಮಾದರಿಯನ್ನು ಪರೀಕ್ಷೆಗೆ ಸಂಗ್ರಹಿಸಲಾಗಿತ್ತು. ಜೂ.28ರಂದು ಸೋಂಕು ಇರುವುದು ದೃಢವಾಗಿತ್ತು. ಇವರಿಗೆ ಯಾವುದೇ ಪ್ರಯಾಣದ ಹಿನ್ನೆಲೆಯೂ ಇಲ್ಲ. ಶನಿವಾರ ರಾತ್ರಿಯೇ ಪೊಲೀಸರು ನ್ಯಾಯಾಲಯ ಆವರಣದ ಗೇಟ್‌ಗಳನ್ನು ಮುಚ್ಚಿದರು. ಭಾನುವಾರ ಆವರಣವನ್ನು ಸ್ಯಾನಿಟೈಸ್ ಮಾಡಲಾಯಿತು. ಹೈಕೋರ್ಟ್‌ ಸೂಚನೆಯ ಅನ್ವಯ ನ್ಯಾಯಾಲಯದ ಬಾಗಿಲು ತೆರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಲ್ಲೂಕು ಸ್ಥಳ

ಗುಬ್ಬಿ :ತಾಲ್ಲೂಕು ಆಸ್ಪತ್ರೆ, ಎಂ.ಎನ್.ಕೋಟೆ

ಪಾವಗಡ :ತಾಲ್ಲೂಕು ಆಸ್ಪತ್ರೆ, ತಿರುಮಣಿ, ವೈ.ಎನ್‌.ಹೊಸಕೋಟೆ

ಕುಣಿಗಲ್‌ :ತಾಲ್ಲೂಕು ಆಸ್ಪತ್ರೆ, ಅಮೃತೂರು, ಎಡೆಯೂರು, ಹುಲಿಯೂರುದುರ್ಗ

ಕೊರಟಗೆರೆ :ತಾಲ್ಲೂಕು ಆಸ್ಪತ್ರೆ, ಎಲೆರಾಂಪುರ, ಅಕ್ಕಿರಾಂಪುರ

ತುಮಕೂರು :ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸಾರ್ವಜನಿಕ ಆರೋಗ್ಯ ಪರೀಕ್ಷಾ ಕೇಂದ್ರ, ಟಿ.ಬಿ.ಕೇಂದ್ರ

ಚಿ.ನಾ.ಹಳ್ಳಿ :ತಾಲ್ಲೂಕು ಆಸ್ಪತ್ರೆ

ಶಿರಾ :ತಾಲ್ಲೂಕು ಆಸ್ಪತ್ರೆ

ಮಧುಗಿರಿ :ತಾಲ್ಲೂಕು ಆಸ್ಪತ್ರೆ

ತಿಪಟೂರು :ತಾಲ್ಲೂಕು ಆಸ್ಪತ್ರೆ

ತುರುವೇಕೆರೆ :ತಾಲ್ಲೂಕು ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.