ADVERTISEMENT

ತುಮಕೂರು | 24 ಸಾವಿರ ಜನಕ್ಕೆ ಕಚ್ಚಿದ ನಾಯಿ; ಮೂರು ತಿಂಗಳಲ್ಲಿ 49 ಶಿಶು ಮರಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 7:39 IST
Last Updated 15 ಫೆಬ್ರುವರಿ 2024, 7:39 IST
ತುಮಕೂರಿನಲ್ಲಿ ನಾಯಿಗಳ ಹಿಂಡು (ಸಾಂದರ್ಭಿಕ ಚಿತ್ರ)
ತುಮಕೂರಿನಲ್ಲಿ ನಾಯಿಗಳ ಹಿಂಡು (ಸಾಂದರ್ಭಿಕ ಚಿತ್ರ)   

ತುಮಕೂರು: ಕಳೆದ ವರ್ಷ ಜಿಲ್ಲೆಯಾದ್ಯಂತ 24,917 ನಾಯಿ ಕಡಿತದ ಪ್ರಕರಣಗಳು ವರದಿಯಾಗಿದ್ದು, ಶಿರಾ ತಾಲ್ಲೂಕಿನ ದೊಡ್ಡ ಅಗ್ರಹಾರದ 13 ವರ್ಷದ ಬಾಲಕ ಹುಚ್ಚುನಾಯಿ ಕಡಿತದಿಂದ ಸಾವನ್ನಪ್ಪಿದ್ದಾನೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ತಾಯಿ ಮತ್ತು ಶಿಶು ಮರಣ, ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಹಾಗೂ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪಿ.ಬಿ.ಎಸ್‌.ರಾಮೇಗೌಡ ಈ ಮಾಹಿತಿ ನೀಡಿದರು.

ಹಾವು ಕಡಿತದಿಂದ ಮಧುಗಿರಿ ತಾಲ್ಲೂಕಿನ ಹೊಸಕೆರೆ, ಮುದ್ದೇನಹಳ್ಳಿ, ಕುಣಿಗಲ್‌ ತಾಲ್ಲೂಕಿನ ಜಿನ್ನಾಗರ, ಪಾವಗಡದ ದೊಡ್ಡಹಳ್ಳಿ ಸೇರಿದಂತೆ ನಾಲ್ಕು ಕಡೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. 2023ರ ಏಪ್ರಿಲ್‌ನಿಂದ 2024ರ ಜನವರಿ ತನಕ ತಂಬಾಕು ನಿಷೇಧ ಕಾಯ್ದೆಯಡಿ 1,861 ಪ್ರಕರಣ ದಾಖಲಿಸಿ, ₹1.79 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.

ADVERTISEMENT

ನಿಗಾ ಘಟಕ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ‘ಕಳೆದ ಸೆಪ್ಟೆಂಬರ್‌ನಿಂದ ಜನವರಿ ವರೆಗೆ 7 ತಾಯಂದಿರು, 49 ಶಿಶುಗಳು ಸಾವನ್ನಪ್ಪಿವೆ. ಅಧಿಕ ರಕ್ತಸ್ರಾವ ಹಾಗೂ ರಕ್ತದೊತ್ತಡದಿಂದ ತಾಯಂದಿರು ಮರಣ ಹೊಂದಿದ್ದಾರೆ. ಮುಂದಿನ 15 ದಿನಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಬ್ಲಡ್ ಬ್ಯಾಂಕ್‌, ಜಿಲ್ಲಾ ಮಟ್ಟದಲ್ಲಿ ಪ್ರಸೂತಿ ವಿಭಾಗಕ್ಕೆ ಒಂದು ತೀವ್ರ ನಿಗಾ ಘಟಕ ತೆರೆಯಬೇಕು’ ಎಂದು ನಿರ್ದೇಶಿಸಿದರು.

ತಂಬಾಕು ನಿಯಂತ್ರಣ ಕಾಯ್ದೆಯಡಿ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದು, ಪ್ರತಿ ತಾಲ್ಲೂಕಿನಲ್ಲಿ ತಿಂಗಳಿಗೆ ಕನಿಷ್ಠ 500 ಪ್ರಕರಣ ದಾಖಲಿಸಿ ಕಾನೂನು ಪಾಲನೆ ಮಾಡುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಆರ್‌ಸಿಎಚ್‌ ಅಧಿಕಾರಿ ಡಾ.ಸಿ.ಆರ್.ಮೋಹನ್‌, ‘ಜಿಲ್ಲೆಯಲ್ಲಿ ಪ್ರತಿ ತಿಂಗಳು ಸುಮಾರು 3 ಸಾವಿರ ಹೆರಿಗೆಗಳಾಗುತ್ತಿವೆ. ನವಜಾತ ಶಿಶುಗಳ ಆರೈಕೆಗೆ ಎಲ್ಲ ತಾಲ್ಲೂಕುಗಳಲ್ಲಿ ತೀವ್ರ ನಿಗಾ ಘಟಕಗಳಿವೆ’ ಎಂದು ತಿಳಿಸಿದರು.

ಡಿಎಚ್‌ಒ ಡಾ.ಡಿ.ಎನ್.ಮಂಜುನಾಥ್‌, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.