ADVERTISEMENT

ತುಮಕೂರು: ವರ್ಷದಲ್ಲಿ 3 ಸಾವಿರ ಮರಕ್ಕೆ ಕೊಡಲಿ

ಮರ ಕಡಿತಕ್ಕೆ ಇಲಾಖೆ ಅನುಮತಿ; ಅಭಿವೃದ್ಧಿ ನೆಪದಲ್ಲಿ ಮರಗಳ ಹನನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 6:07 IST
Last Updated 25 ಸೆಪ್ಟೆಂಬರ್ 2025, 6:07 IST
ತುಮಕೂರಿನ ದೇವರಾಯನದುರ್ಗದ ಅರಣ್ಯ ಪ್ರದೇಶ
ತುಮಕೂರಿನ ದೇವರಾಯನದುರ್ಗದ ಅರಣ್ಯ ಪ್ರದೇಶ    

ತುಮಕೂರು: ಅಭಿವೃದ್ಧಿಯ ನೆಪದಲ್ಲಿ ಮರಗಳಿಗೆ ನಿರಂತರವಾಗಿ ಕೊಡಲಿ ಏಟು ಬೀಳುತ್ತಿದೆ. ಅರಣ್ಯ ಇಲಾಖೆ ಅಂಕಿ–ಅಂಶದ ಪ್ರಕಾರ ಜಿಲ್ಲೆಯಲ್ಲಿ ಕಳೆದ ಆರ್ಥಿಕ ವರ್ಷ 2,967 ಮರ ಕಡಿಯಲಾಗಿದೆ.

ಜಿಲ್ಲೆಯಾದ್ಯಂತ ಒಂದೇ ವರ್ಷದಲ್ಲಿ 3,369 ಮರ ಕಡಿಯಲು ಅರಣ್ಯ ಇಲಾಖೆಗೆ 527 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 448 ಅರ್ಜಿಗಳು ವಿಲೇವಾರಿಯಾಗಿದ್ದು, 2,967 ಮರ ಕಡಿಯಲು ಇಲಾಖೆಯಿಂದಲೇ ಅಧಿಕೃತವಾಗಿ ಅನುಮತಿ ನೀಡಲಾಗಿದೆ.

ತುಮಕೂರು ಉಪವಿಭಾಗದ ವ್ಯಾಪ್ತಿಯಲ್ಲಿ 10 ಅರಣ್ಯ ವಲಯಗಳಿವೆ. ಜಿಲ್ಲೆ ಅರೆಮಲೆನಾಡಿನ ವಾತಾವರಣ ಹೊಂದಿದೆ. ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಅರಣ್ಯ ಪ್ರದೇಶವು 19 ಸಾವಿರ ಹೆಕ್ಟೇರ್‌ ಪ್ರದೇಶ ಹೊಂದಿದ್ದು, ಜಿಲ್ಲೆಯ ಅತಿ ದೊಡ್ಡ ಅರಣ್ಯ ಪ್ರದೇಶವಾಗಿದೆ. ದೇವರಾಯನದುರ್ಗ, ಕುಣಿಗಲ್‌ನ ಉಜ್ಜನಿ, ನಿಡಗಲ್‌ ಬೆಟ್ಟ, ಮಧುಗಿರಿಯ ತಿಮ್ಲಾಪುರ ಅರಣ್ಯ ಪ್ರದೇಶ, ಜಯಮಂಗಲಿ ಕೃಷ್ಣಮೃಗ ವನ್ಯಧಾಮ ಪ್ರಮುಖ ಅರಣ್ಯ ಪ್ರದೇಶಗಳು.

ADVERTISEMENT

ಕಳೆದ ಕೆಲ ವರ್ಷಗಳಿಂದ ಈಚೆಗೆ ಅರಣ್ಯ ಉಳಿಸಿಕೊಳ್ಳುವುದು ಸವಾಲಾಗಿದೆ. ನೆಟ್ಟ ಸಸಿ ಗಿಡವಾಗಿ ಬೆಳೆಯುತ್ತಿಲ್ಲ. ಹೆಮ್ಮರವಾಗಿ ಬೆಳೆದ ಮರಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ವಿವಿಧ ಕಾಮಗಾರಿ, ರಸ್ತೆ ನಿರ್ಮಾಣ, ನಿವೇಶನ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಇದರಿಂದ ಜಿಲ್ಲೆಯ ಹಸಿರು ಹೊದಿಕೆ ಪ್ರಮಾಣವೂ ಕುಸಿಯ ತೊಡಗಿದೆ.

ಮನೆ, ನಿವೇಶನ ನಿರ್ಮಾಣಕ್ಕೆ ತೊಂದರೆಯಾಗುವ, ಕಟ್ಟಡದ ಮೇಲೆ ಬಾಗಿರುವ, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ, ಮಳೆ, ಗಾಳಿಗೆ ಬೀಳುವ ಹಂತದಲ್ಲಿರುವ, ರಸ್ತೆ ವಿಸ್ತರಣೆಗೆ ಸಮಸ್ಯೆ ಉಂಟು ಮಾಡುವ ಕಾರಣಕ್ಕೆ ಅರಣ್ಯ ಇಲಾಖೆಯೇ ಮರಗಳ ತೆರವಿಗೆ ಕ್ರಮ ವಹಿಸುತ್ತಿದೆ. ಚರಂಡಿ ನಿರ್ಮಾಣ ಕಾಮಗಾರಿಗೂ ಹಲವು ಮರಗಳು ನೆಲಕ್ಕುರುಳಿವೆ.

ಮರ ತೆರವಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ಕಾಮಗಾರಿ ನಡೆಸುವವರು, ಮನೆ ಮಾಲೀಕರು ಆಯಾ ವಲಯ ಅರಣ್ಯ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ವಾಸ್ತವ ಅರಿತು ಮರ ತೆರವು ಅನಿವಾರ್ಯ ಎನಿಸಿದಾಗ ಮಾತ್ರ ಅನುಮತಿ ನೀಡಲಾಗುತ್ತದೆ. 90 ದಿನದಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ.

‘ಬಹುತೇಕ ಅರ್ಜಿಗಳಿಗೆ ಮರ ಕಡಿಯಲು ಅನುಮತಿ ನೀಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಾರೆ. ಅಂತಹ ಕಡೆಗಳಲ್ಲಿ ಏನೂ ಮಾಡಲು ಆಗುವುದಿಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪರಿಸರ ಸಮತೋಲನ ಅಸಾಧ್ಯ

ಅರಣ್ಯ ಇಲಾಖೆ ಅಧಿಕಾರಿಗಳು ಮರ ಕಡಿದಷ್ಟು ಪ್ರಮಾಣದಲ್ಲಿ ಸಸಿ ನೆಟ್ಟು ಬೆಳೆಸುವುದಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಗೊಂಡ ನಂತರ ನಗರದಲ್ಲಿ ಹಲವು ಮರಗಳು ನೆಲಕ್ಕುರುಳಿದವು. ನಗರ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿಲ್ಲ ಎಂದು ಪರಿಸರವಾದಿ ಸಿ.ಯತಿರಾಜು ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ನೈಸರ್ಗಿಕ ತಾಣವಾದ ಅಮಾನಿಕೆರೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಮುಂದಾಗಿದ್ದಾರೆ. ಮರ ಪರಿಸರ ಸಂರಕ್ಷಣೆಗೆ ಸ್ಥಳೀಯರು ಧ್ವನಿ ಎತ್ತಬೇಕು. ಇಲ್ಲದಿದ್ದರೆ ಪರಿಸರ ಸಮತೋಲನ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.