ADVERTISEMENT

ಎದೆಹಾಲು ಉಣಿಸುತ್ತಿಲ್ಲ ಶೇ 56ರಷ್ಟು ತಾಯಂದಿರು!

ವಿಶ್ವ ಸ್ತನಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞೆ ಡಾ.ಎಂ.ರಜನಿ ಬೇಸರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:56 IST
Last Updated 2 ಆಗಸ್ಟ್ 2019, 19:56 IST
ವಿಶ್ವಸ್ತನಪಾನ ದಿನಾಚರಣೆ ಕಾರ್ಯಕ್ರಮವನ್ನು ತಾಯಂದಿರು ಉದ್ಘಾಟಿಸಿದರು. ಡಾ.ರಜನಿ, ಡಾ.ಕೇಶವ್‌ ರಾಜ್, ಡಾ.ಮೋಹನ್ ದಾಸ್, ಎಸ್.ನಟರಾಜ್, ಜಿ.ಕೆ.ಕುಲಕರ್ಣಿ ಇದ್ದರು
ವಿಶ್ವಸ್ತನಪಾನ ದಿನಾಚರಣೆ ಕಾರ್ಯಕ್ರಮವನ್ನು ತಾಯಂದಿರು ಉದ್ಘಾಟಿಸಿದರು. ಡಾ.ರಜನಿ, ಡಾ.ಕೇಶವ್‌ ರಾಜ್, ಡಾ.ಮೋಹನ್ ದಾಸ್, ಎಸ್.ನಟರಾಜ್, ಜಿ.ಕೆ.ಕುಲಕರ್ಣಿ ಇದ್ದರು   

ತುಮಕೂರು: ’ಸ್ತನಪಾನದ ಬಗ್ಗೆ ಜಾಗೃತಿ ಮೂಡಸುತ್ತಿದ್ದರೂ ಸಹ ದೇಶದಲ್ಲಿ ಕೇವಲ ಶೇ 56ರಷ್ಟು ತಾಯಂದಿರು ಮಾತ್ರ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾರೆ’ ಎಂದು ಮಕ್ಕಳ ತಜ್ಞೆ ಹಾಗೂ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ಎಂ.ರಜನಿ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ಧ ವಿಶ್ವ ಸ್ತನಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈಗ ಶೇ 56ರಷ್ಟು ಮಾತ್ರ ತಾಯಂದಿರು ಎದೆಹಾಲು ಉಣಿಸುತ್ತಿದ್ದು, ಇದನ್ನು 2025ರ ವೇಳೆಗೆ ಶೇ 65ಕ್ಕೆ ತಲುಪಿಸುವ ಗುರಿ ಹೊಂದಲಾಗಿದೆ. ಮಗುವಿಗೆ 6 ತಿಂಗಳವರೆಗೂ ಎದೆ ಹಾಲನ್ನೇ ಕುಡಿಸಬೇಕು. ಇದರಿಂದ ಶಿಶುಮರಣ ಪ್ರಮಾಣ ತಪ್ಪಿಸಬಹುದು’ ಎಂದು ಹೇಳಿದರು.

ADVERTISEMENT

’ಪೋಷಕರನ್ನು ಸಶಕ್ತಗೊಳಿಸಿ, ಸ್ತನಪಾನವನ್ನು ಸಕ್ರಿಯಗೊಳಿಸಿ ಎಂಬುದು ಸಪ್ತಾಹದ ಘೋಷವಾಕ್ಯವಾಗಿದೆ. ತಾಯಿಯ ಮೊದಲ ಹಾಲು ಉಣಿಸುವುದರಿಂದ ಮಕ್ಕಳು ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತಾರೆ. ನವಜಾತ ಶಿಶುವಿಗೆ 6 ತಿಂಗಳವರೆಗೆ ಮೇಲು ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಹೀಗಾಗಿ, ತಪ್ಪದೇ ತಾಯಿಯ ಹಾಲನ್ನೇ ನೀಡಬೇಕು’ ಎಂದು ನುಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಮಾತನಾಡಿ, ‘ಹುಟ್ಟಿದ 6 ತಿಂಗಳ ಒಳಗೆ ಮಗುವಿನ ಸಮರ್ಪಕ ಬೆಳವಣಿಗೆಗೆ ತಾಯಿಯ ಹಾಲೇ ಸಾಕಾಗುತ್ತದೆ. ಈ ಅವಧಿಯಲ್ಲಿ ಮಗುವಿಗೆ ತಾಯಿಯ ಹಾಲನ್ನಲ್ಲದೇ ಬೇರೆ ಯಾವುದೇ ದ್ರವಗಳನ್ನು ಕುಡಿಸಬಾರದು’ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಮಕ್ಕಳ ತಜ್ಞೆ ಡಾ.ಮುಕ್ತಾಂಬ ಮಾತನಾಡಿ, ‘ಜನಿಸಿದ ಮಗುವಿಗೆ ಸ್ತನ್ಯಪಾನ ಮಾಡಿಸುವ ಮೊದಲು ಬೇರೆ ದ್ರವಗಳನ್ನು ಕುಡಿಸಿದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ’ ಎಂದು ಸಲಹೆ ನೀಡಿದರು.

ಸೌಂದರ್ಯ ಹಾಳಾಗುವ ತಪ್ಪು ಕಲ್ಪನೆ ಸಲ್ಲದು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್. ಚಂದ್ರಿಕಾ ಮಾತನಾಡಿ, ‘ಜನಿಸಿದ ಮಗುವಿಗೆ ೩// ದಿನಗಳ ಕಾಲ ಹಾಲುಣಿಸಬಾರದೆನ್ನುವ ಅವಿದ್ಯಾವಂತರಿಗಿರುವ ಮೌಢ್ಯತೆ ಹಾಗೂ ಹಾಲುಣಿಸುವುದರಿಂದ ದೇಹದ ಸೌಂದರ್ಯ ಹಾಳಾಗುತ್ತದೆ ಎಂಬ ವಿದ್ಯಾವಂತ ತಾಯಂದಿರಲ್ಲಿರುವ ತಪ್ಪುಕಲ್ಪನೆಯಿಂದ ದೇಶದಲ್ಲಿ ಸ್ತನಪಾನ ಪ್ರಮಾಣ ಕಡಿಮೆ ಇದೆ’ ಎಂದರು.

‘ಹಾಲುಣಿಸುವ ಮನಸ್ಸಿದ್ದರೂ ಖಾಸಗಿ ಉದ್ದಿಮೆಗಳಲ್ಲಿರುವ ಉದ್ಯೋಗಸ್ಥ ತಾಯಂದಿರಿಗೆ ಅವಕಾಶ ಹಾಗೂ ರಜೆ ಸೌಲಭ್ಯ ಇರುವುದಿಲ್ಲ. ಈ ನಿಟ್ಟಿನಲ್ಲಿ ಉದ್ದಿಮೆಗಳು ಉದ್ಯೋಗಸ್ಥ ತಾಯಂದಿರಿಗೆ ಮಗುವಿನ ಆರೈಕೆಯ ದೃಷ್ಟಿಯಿಂದ ಹೆರಿಗೆ ರಜೆ ಅವಧಿಯನ್ನು ವಿಸ್ತರಿಸಬೇಕು. ಅಲ್ಲದೇ, ಮಗುವಿಗೆ ಹಾಲುಣಿಸಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಜಿ. ಕೇಶವ್‌ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ತರಬೇತಿ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಕೆ ಕುಲಕರ್ಣಿ ಸ್ತನ್ಯಪಾನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಮೋಹನ್‌ದಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಆರ್.ಪರಶುರಾಮಯ್ಯ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಹನುಮಂತರಾಯಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.