ADVERTISEMENT

ತಟ್ಟೆ, ಲೋಟ ಬಡಿದು ಆಕ್ರೋಶ

6ನೇ ವೇತನ ಆಯೋಗ ಜಾರಿಗೆ ಸಾರಿಗೆ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 5:30 IST
Last Updated 13 ಏಪ್ರಿಲ್ 2021, 5:30 IST
ಕೊರಟಗೆರೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಹಾಗೂ ಕುಟುಂಬದ ಸದಸ್ಯರು ರೈತ ಸಂಘದೊಂದಿಗೆ ತಟ್ಟೆ, ಲೋಟ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು
ಕೊರಟಗೆರೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಹಾಗೂ ಕುಟುಂಬದ ಸದಸ್ಯರು ರೈತ ಸಂಘದೊಂದಿಗೆ ತಟ್ಟೆ, ಲೋಟ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು   

ಕೊರಟಗೆರೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಹಾಗೂ ಕುಟುಂಬದ ಸದಸ್ಯರು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯೊಂದಿಗೆ ಸೇರಿ ಪಟ್ಟಣದಲ್ಲಿ ತಟ್ಟೆ, ಲೋಟ ಬಡಿಯುವ ಮೂಲಕ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ವತಿಯಿಂದ ತುಮಕೂರು ಜಿಲ್ಲಾ ಅಧ್ಯಕ್ಷ ಆನಂದ್ ಪಾಟೀಲ್ ಮತ್ತು ಪುಟ್ಟಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತುಮಕೂರು, ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನ ನೂರಾರು ಸಾರಿಗೆ ನೌಕರರು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಟ್ಟೆ, ಲೋಟ ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಆನಂದ್ ಪಾಟೀಲ್, ರಸ್ತೆ ಸಾರಿಗೆ ನೌಕರರ ಮೇಲೆ ಸರ್ಕಾರ ಎಸ್ಮಾ ಜಾರಿ ಮಾಡಲು ಹೊರಟಿದೆ. ಇದೇ ರೀತಿಯಾದರೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭಸ್ಮವಾಗುತ್ತದೆ. ರಾಜ್ಯದಲ್ಲಿ 1.30 ಲಕ್ಷ ಸಾವಿರ ಸಾರಿಗೆ ನೌಕರರು ಇದ್ದಾರೆ. ಅವರು ಮತ್ತು ರೈತ ಸಂಘಟನೆ ಸೇರಿಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟುಗೂಡಿ ಬಿಜೆಪಿ ವಿರುದ್ಧ ಮತ ಹಾಕಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೈಕಮಾಂಡ್‌ಗೆ ಮಕ್ಮಲ್ ಟೋಪಿ ಹಾಕಿ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾಗಿದ್ದಾರೆ. ಅವರು ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಕೇವಲವಾಗಿ ಮಾತಾಡುವುದು ಸರಿಯಲ್ಲ. ಬಿಜೆಪಿ ಸರ್ಕಾರ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸದೆ ಕೋಡಿಹಳ್ಳಿ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದ ವ್ಯಕ್ತಿ ಎಂದು ಬಿಂಬಿಸಿ ದೂಷಿಸಲಾಗುತ್ತಿದೆ ಎಂದು ಟೀಕಿಸಿದರು.

ಮುಖ್ಯ‌ಮಂತ್ರಿ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿದಾಗ ಒಂದು ರೀತಿ, ಆಡಳಿತ ಪಕ್ಷದಲ್ಲಿದ್ದಾಗ ಒಂದು ರೀತಿ ಮಾತನಾಡುತ್ತಾರೆ. ಬಹುತೇಕ ರಸ್ತೆ ಸಾರಿಗೆ ನೌಕರರು ಗ್ರಾಮೀಣ ಪ್ರದೇಶದ ರೈತರ ಮಕ್ಕಳಾಗಿದ್ದಾರೆ. ಸರ್ಕಾರ ಇವರ ಮೇಲೆ ಸವಾರಿ ಮಾಡುವುದನ್ನು ಬಿಟ್ಟು ಆರನೇ ವೇತನವನ್ನು ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಸಿದ್ದರಾಜು, ರುದ್ರೇಶ್, ಪುಟ್ಟರಾಜು ಸೇರಿದಂತೆ ನೂರಾರು ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.