ADVERTISEMENT

ತುಮಕೂರು: ಸರ್ವೋದಯ ಸಂಸ್ಥೆಯಿಂದ 50 ವಿದ್ಯಾರ್ಥಿಗಳ ಪ್ರವೇಶಾತಿ ರದ್ದು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 5:57 IST
Last Updated 20 ಜುಲೈ 2024, 5:57 IST
ತುಮಕೂರಿನಲ್ಲಿ ಶುಕ್ರವಾರ ಪ್ರಭಾರ ಡಿಡಿಪಿಯು ಬಿ.ಪಿ.ತ್ರಿವೇಣಿ ಜತೆ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್‌ ಹಾಲಪ್ಪ ಸಭೆ ನಡೆಸಿದರು
ತುಮಕೂರಿನಲ್ಲಿ ಶುಕ್ರವಾರ ಪ್ರಭಾರ ಡಿಡಿಪಿಯು ಬಿ.ಪಿ.ತ್ರಿವೇಣಿ ಜತೆ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್‌ ಹಾಲಪ್ಪ ಸಭೆ ನಡೆಸಿದರು   

ತುಮಕೂರು: ಸರ್ವೋದಯ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ವಿದ್ಯಾರ್ಥಿಗಳನ್ನು ಸರ್ಕಾರಿ ಕಾಲೇಜಿಗೆ ಸೇರಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್‌ ಹಾಲಪ್ಪ ತಿಳಿಸಿದರು.

ಕಾಲೇಜಿನ ಪಿಸಿಎಂಬಿ ವಿಭಾಗದಲ್ಲಿ 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, 150 ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಇದೀಗ ದ್ವಿತೀಯ ಪಿಯುಸಿಯಲ್ಲಿ ಅಭ್ಯಾಸ ಮಾಡುತ್ತಿರುವ 50 ಮಂದಿಯ ಪ್ರವೇಶ ರದ್ದು ಮಾಡಲಾಗುವುದು ಎಂದು ಸರ್ವೋದಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿತ್ತು.

ನಗರದ ಶಾಲಾ ಶಿಕ್ಷಣ ಇಲಾಖೆಯ ಡಿಡಿ ಪಿಯು ಕಚೇರಿಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಹಾಲಪ್ಪ ಸಭೆ ನಡೆಸಿದರು.

ADVERTISEMENT

‘50 ವಿದ್ಯಾರ್ಥಿಗಳನ್ನು ಹತ್ತಿರದ ಸರ್ಕಾರಿ ಕಾಲೇಜಿಗೆ ಸೇರಿಸುವಂತೆ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಚಿಸಿದ್ದು, ಇದಕ್ಕೆ ಪೋಷಕರು ಒಪ್ಪುತ್ತಿಲ್ಲ. ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆ ಆಯುಕ್ತರ ಜತೆ ಈ ಬಗ್ಗೆ ಚರ್ಚಿಸಲಾಗಿದೆ. ಅವರು ಸಹ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆಯುವಂತೆ ಸೂಚಿಸಿದ್ದಾರೆ’ ಎಂದರು.

ಸರ್ವೋದಯ ಶಿಕ್ಷಣ ಸಂಸ್ಥೆಯವರು ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾನವೀಯ ಹಿನ್ನೆಲೆಯಲ್ಲಿ ಇದೊಂದು ಬಾರಿ ಅನುಮತಿ ನೀಡುವಂತೆ ಕೋರಿದ್ದಾರೆ. ಸರ್ವೋದಯ ಕಾಲೇಜಿನಲ್ಲಿ ಮುಂದುವರಿಯಲು ಅವಕಾಶ ನೀಡದಿದ್ದರೆ, ಸರ್ಕಾರಿ ಕಾಲೇಜಿಗೆ ದಾಖಲಿಸಬೇಕು. ಮಕ್ಕಳ ಭವಿಷ್ಯ ಹಾಳಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರಭಾರ ಡಿಡಿಪಿಯು ಬಿ.ಪಿ.ತ್ರಿವೇಣಿ, ಶಾಲಾ ಶಿಕ್ಷಣ ಇಲಾಖೆಯ ಸಂತೋಷ್‌, ರಾಮಣ್ಣ, ಶ್ರೀಕೃಷ್ಣ ವಿದ್ಯಾಸಂಸ್ಥೆಯ ಮರಿಚನ್ನಮ್ಮ, ರೇವಣ್ಣಸಿದ್ದಯ್ಯ, ಭಾಗ್ಯಮ್ಮ, ಜಗದೀಶ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.