ತುಮಕೂರಿನಲ್ಲಿ ಗುರುವಾರ ಸೈಬರ್ ಭದ್ರತಾ ಆಡಳಿತ ಘಟಕ ಸ್ಥಾಪನೆ, ಸೈಬರ್ ಅಪರಾಧ ನಿಯಂತ್ರಣ ಸೇರಿ ಹಲವು ಯೋಜನೆಗಳ ಒಡಂಬಡಿಕೆಗೆ ಎಸ್‌ಎಸ್‌ಐಟಿ ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಬಿ.ವಿ.ಅಶ್ವಿಜ ಸಹಿ ಹಾಕಿದರು.
ತುಮಕೂರು: ಸೈಬರ್ ಭದ್ರತಾ ಆಡಳಿತ ಘಟಕ ಸ್ಥಾಪನೆ, ಸೈಬರ್ ಅಪರಾಧ ನಿಯಂತ್ರಣ ಸೇರಿ ಹಲವು ಯೋಜನೆಗಳ ಒಡಂಬಡಿಕೆಗೆ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯ (ಸಾಹೇ) ಮತ್ತು ಸ್ಮಾರ್ಟ್ ಸಿಟಿ ವತಿಯಿಂದ ಸಹಿ ಹಾಕಲಾಯಿತು.
ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಾಹೇ ವಿ.ವಿ, ಸ್ಮಾರ್ಟ್ ಸಿಟಿ, ಹಸ್ತಾಕ್ಷ ಲ್ಯಾಬ್ ಸಹಯೋಗದಲ್ಲಿ ಸೈಬರ್ ಭದ್ರತಾ ಆಡಳಿತ ಕೋಶ ಸ್ಥಾಪನೆ, ಭದ್ರತಾ ಲೆಕ್ಕಪರಿಶೋಧಕರು, ಸೈಬರ್ ತಜ್ಞರನ್ನು ಸಕ್ರಿಯಗೊಳಿಸುವುದು, ಇಂಟರ್ನ್‌ಶಿಪ್ ಮತ್ತು ಜಂಟಿ ಯೋಜನೆ ಒಳಗೊಂಡಂತೆ ಇತರೆ ವಿಷಯ ಕುರಿತ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ‘ಅಪರಾಧ ಪ್ರವೃತ್ತಿಯ ಕೆಲವರು ತಂತ್ರಜ್ಞಾನ ದುರುಪಯೋಗ ಪಡಿಸಿಕೊಂಡು ಸಮಾಜಕ್ಕೆ ಹಾನಿ ಮಾಡುತ್ತಿದ್ದಾರೆ. ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡು ಸೈಬರ್ ಅಪರಾಧ ನಿಯಂತ್ರಿಸುವ ಅಗತ್ಯ ಇದೆ’ ಎಂದರು.
ಕಳ್ಳತನ, ವಂಚನೆ ಅಪರಾಧಗಳು ಈಗ ಡಿಜಿಟಲ್ ರೂಪ ಪಡೆದಿವೆ. ಇದರಿಂದ ಎಲ್ಲ ವರ್ಗದ ನಾಗರಿಕರು ಎಚ್ಚರಿಕೆಯಿಂದ ತಂತ್ರಜ್ಞಾನ ಬಳಸಬೇಕು. ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳುವ ಯಾವುದೇ ಲಿಂಕ್‌ಗಳನ್ನು ಪರಿಶೀಲಿಸದೆ ಕ್ಲಿಕ್ ಮಾಡಬಾರದು ಎಂದು ಎಚ್ಚರಿಸಿದರು.
ಮಹಾನಗರ ಪಾಲಿಕೆ ಆಯುಕ್ತೆ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಬಿ.ವಿ.ಅಶ್ವಿಜ, ಎಸ್‌ಎಸ್‌ಐಟಿ ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ್, ಡೀನ್ ರೇಣುಕಾಲತಾ, ಹಸ್ತಾಕ್ಷ ಲ್ಯಾಬ್‌ನ ನಿರ್ದೇಶಕ ನಂದಿಧರ್ಮ ಕೀಶೋರ್, ಸ್ಟಾರ್ಟ್ ಆಫ್ ತುಮಕೂರು ಸಂಸ್ಥಾಪಕ ಸೂರತ್ ಉಜ್ಜಿನ್, ಸಿದ್ಧಾರ್ಥ ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಎಸ್.ಸಂಜೀವ್‌ಕುಮಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.