ತುಮಕೂರು: ನಗರದ ಕುಡಿಯುವ ನೀರಿನ ಬವಣೆ ಕಡಿಮೆ ಮಾಡಲು ಅಮಾನಿಕೆರೆ ನೀರು ಬಳಕೆಗೆ ಯೋಜನೆ ಸಿದ್ಧವಾಗುತ್ತಿದ್ದರೆ, ಮತ್ತೊಂದೆಡೆ ಕೆರೆಯ ನೀರು ದಿನೇ ದಿನೇ ಕಲುಷಿತವಾಗುತ್ತಿದೆ. ಪ್ಲಾಸ್ಟಿಕ್, ತ್ಯಾಜ್ಯ ಕೆರೆಯ ಒಡಲು ಸೇರುತ್ತಿದೆ.
ಕೆರೆ ಆವರಣದಲ್ಲಿ ಗಾಜಿನ ಮನೆಗೆ ಹೊಂದಿಕೊಂಡಂತೆ ಇರುವ ವಾಣಿಜ್ಯ ಮಳಿಗೆ ಬಳಿ, ಕೆರೆಯ ದಡದಲ್ಲಿ ಕಸದ ರಾಶಿ ಸುರಿಯಲಾಗುತ್ತಿದೆ. ಅದು ಕೊಳೆತು, ನಂತರ ಕೆರೆಯ ನೀರು ಸೇರುತ್ತಿದೆ. ಒಂದು ಸಣ್ಣ ಮಳೆ ಸುರಿದರೂ ಕಸ ಕೆರೆಗೆ ಹರಿಯುತ್ತದೆ. ಕೆರೆ ಸುಮಾರು 500 ಎಕರೆ ವಿಸ್ತೀರ್ಣ ಹೊಂದಿದ್ದು, ಒಂದು ಕಡೆಯಲ್ಲಿ ಕೋತಿತೋಪು ಮುಖ್ಯರಸ್ತೆಯಿಂದ ಕೊಳಚೆ ನೀರು ಹರಿಯುವುದನ್ನು ತಡೆಯುವ ಕಾರ್ಯ ಹಲವು ದಿನಗಳಿಂದ ನಡೆಯುತ್ತಿದೆ. ಆದರೆ ಈವರೆಗೂ ತಡೆಯಲು ಸಾಧ್ಯವಾಗಿಲ್ಲ. ಮತ್ತೊಂದು ಕಡೆಯಿಂದ ಪ್ಲಾಸ್ಟಿಕ್ ಕೆರೆಯ ಭಾಗವಾಗುತ್ತಿದೆ.
ಕೊಳಚೆ ನೀರು ನಿರಂತರವಾಗಿ ಹರಿದ ಪರಿಣಾಮ ಅಂತರಗಂಗೆ (ಕಳೆ ಗಿಡ) ಹೆಚ್ಚಾಗಿ ಹರಡಿಕೊಂಡಿತ್ತು. ಒಂದು ತಿಂಗಳು ಕಾಲ ಹಿಟಾಚಿ ವಾಹನ ಬಳಸಿ, ಸ್ವಚ್ಛಗೊಳಿಸಿ ಕಳೆ ಗಿಡ ಹೊರಗೆ ಹಾಕಲಾಯಿತು. ಇದಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರವು ₹5 ಲಕ್ಷ ವೆಚ್ಚ ಮಾಡಿತು. ಇದರ ನಂತರವೂ ಕೆರೆಯ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಕೆರೆಯಲ್ಲಿ ಬೋಟಿಂಗ್ ನಡೆಸಿ, ಸಾರ್ವಜನಿಕರ ಪ್ರವೇಶಕ್ಕೆ ಶುಲ್ಕ ವಿಧಿಸುವ ಮುಖಾಂತರ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸಲಾಗುತ್ತಿದೆ. ಆದರೆ ಕೆರೆಯ ಉಳಿವಿಗೆ ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯಡಿ ₹80 ಕೋಟಿ ವೆಚ್ಚ ಮಾಡಿ ಕೆರೆ ಅಭಿವೃದ್ಧಿ ಪಡಿಸಲಾಯಿತು. ಆಸನ ವ್ಯವಸ್ಥೆ, ಮಕ್ಕಳ ಆಟೋಟದ ಸಾಮಗ್ರಿ, ಥೀಮ್ ಪಾರ್ಕ್ ಸೇರಿ ಹಲವು ಜನಾಕರ್ಷಕ ಕಾಮಗಾರಿ ನಡೆಸಲಾಗಿತ್ತು. ಇದೀಗ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಅಮಾನಿಕೆರೆ ಬಳಿ ತಾರಾಲಯ ಹಾಗೂ ನೀರು ಶುದ್ಧೀಕರಣ ಘಟಕ, ಗಾಜಿನ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇಷ್ಟೆಲ್ಲ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ ಕೆರೆಯ ನೀರು ಸ್ವಚ್ಛಗೊಳ್ಳುತ್ತಿಲ್ಲ.
ನಗರಕ್ಕೆ ಬುಗುಡನಹಳ್ಳಿ ಕೆರೆಯಿಂದ ನೀರು ಪೂರೈಸಲಾಗುತ್ತಿದೆ. ಇದನ್ನು ಹೊರತುಪಡಿಸಿದರೆ ಬೇರೆ ಕಡೆ ನೀರು ಸಂಗ್ರಹಕ್ಕೆ ಪೂರಕವಾದ ಜಾಗವಿಲ್ಲ. ಮರಳೂರು ಕೆರೆ ಹಾಗೂ ಅಮಾನಿಕೆರೆ ಸ್ವಚ್ಛಗೊಳಿಸಿ ಹೇಮಾವತಿ ನೀರು ಹರಿಸಲಾಗುವುದು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳುತ್ತಾ ಬರುತ್ತಿದ್ದಾರೆ. ಇದುವರೆಗೆ ಕಾರ್ಯ ರೂಪಕ್ಕೆ ಬರುತ್ತಿಲ್ಲ. ಮರಳೂರು ಕೆರೆಗೆ ತ್ಯಾಜ್ಯ ಸುರಿಯುವುದು ಮತ್ತಷ್ಟು ಹೆಚ್ಚುತ್ತಲೇ ಸಾಗಿದೆ. ನಗರದ ವ್ಯಾಪ್ತಿಯಲ್ಲಿದ್ದ ಕೆರೆಗಳು ಮರೆಯಾಗಿದ್ದು, ಇರುವ ಕೆರೆಗಳನ್ನು ಉಳಿಸಿ, ಸಂರಕ್ಷಿಸಬೇಕಿದೆ.
500 ಎಕರೆ ವಿಸ್ತೀರ್ಣ ಅಮಾನಿಕೆರೆ ಅಧ್ವಾನ ನಿರ್ವಹಣೆಗಿಲ್ಲ ಆಸಕ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.