
ತುಮಕೂರು ತಾಲ್ಲೂಕು ದೊಡ್ಡಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಶನಿವಾರ ಮಹಾತ್ಮ ಗಾಂಧೀಜಿ ಪುತ್ಥಳಿ ಅನಾವರಣ ಗೊಳಿಸಲಾಯಿತು. ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ,
ತುಮಕೂರು: ಗಾಂಧಿ ಸ್ವರಾಜ್ಯದ ಕಲ್ಪನೆಯನ್ನು ಕಾನೂನಾತ್ಮಕವಾಗಿ ಸಾಕಾರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಜನ ಸಾಮಾನ್ಯರು ಸೇರಿ ಎಲ್ಲರು ಶ್ರಮಿಸಿದರೆ ಗ್ರಾಮ ಭಾರತ ಸಶಕ್ತವಾಗಲು ಸಾಧ್ಯ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೊಡ್ಡಹೊಸೂರು ಬಳಿಯ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಶನಿವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣ, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮಗೆ ಬೇಕಾದ ಸರ್ಕಾರ ರಚಿಸುವ ಸಾಮರ್ಥ್ಯ ಸಾಮಾನ್ಯರಿಗೆ ಬರಬೇಕು. ಆಗ ಮಾತ್ರ ಗಾಂಧಿ ಕಂಡ ಕನಸು ನನಸಾಗಲಿದೆ. ಗಾಂಧಿಯ ಆದರ್ಶ ಕಠಿಣ. ಆದರೆ, ಆ ದಾರಿ ಅನಿವಾರ್ಯ. ನಾವು ಸಂವೇದನೆ ಬೆಳೆಸಿಕೊಂಡು ಸಮಾಜದ ಅಸಮಾನತೆ, ಕ್ರೌರ್ಯ, ಅಸಹಿಷ್ಣುತೆ, ಅಸತ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ‘ಭಾರೀ ವಿರೋಧದ ಮಧ್ಯೆ ನರೇಗಾ ಯೋಜನೆಯಲ್ಲಿ ಗಾಂಧಿ ಹೆಸರು ಕೈಬಿಡಲಾಗಿದೆ. ‘ವಿಬಿ– ಜಿ ರಾಮ್ ಜಿ’ ಎಂಬ ಹೆಸರಿಟ್ಟ ಮಾತ್ರಕ್ಕೆ ಜನರಿಂದ ಗಾಂಧಿ ವಿಚಾರಧಾರೆ ಕಿತ್ತು ಹಾಕಲು ಸಾಧ್ಯವಿಲ್ಲ. ಗಾಂಧೀಜಿ ಜಗತ್ತಿನ ಆದರ್ಶ’ ಎಂದರು.
ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ‘ಶಿಕ್ಷಣ ಪಡೆದವರು ಸಮಾಜಮುಖಿಯಾಗಿ ಹೊರಹೊಮ್ಮಬೇಕು. ಕೇವಲ ಹಣ ಗಳಿಕೆಯ ದೃಷ್ಟಿಕೋನದ ಶಿಕ್ಷಣದಿಂದ ಪ್ರಯೋಜನವಿಲ್ಲ’ ಎಂದು ಹೇಳಿದರು.
ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಸಹಜ ಬೇಸಾಯ ಆಶ್ರಮದ ಡಾ.ಮಂಜುನಾಥ್, ಪ್ರೊ.ಶಿವರಾಜ್, ಸಿ.ಯತಿರಾಜು, ರವೀಶ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.