ADVERTISEMENT

ಕುಣಿಗಲ್: ಅಂಗನವಾಡಿ ನೌಕರರ ಪ್ರತಿಭಟನೆ

ಕೇಂದ್ರ ಸರ್ಕಾರದಿಂದ ರೈತ, ಕಾರ್ಮಿಕ ವಿರೋಧಿ ನೀತಿ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:42 IST
Last Updated 10 ಜುಲೈ 2025, 5:42 IST
ಕುಣಿಗಲ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ನಡೆಸಿದರು 
ಕುಣಿಗಲ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ನಡೆಸಿದರು    

ಕುಣಿಗಲ್: ರಾಜ್ಯ ಸಮಿತಿ ಕರೆಯ ಮೇರೆಗೆ ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್, ಕೇಂದ್ರ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಕಾರ್ಪೋರೇಟ್ ಕಂಪನಿಗಳ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ, ಆಹಾರ ಮತ್ತು ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿರುವ ಅಂಗನವಾಡಿ ಕಾರ್ಯಕರ್ತರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಪೋಷಣ್ ಅಭಿಯಾನದಲ್ಲಿ ಕಾರ್ಯನಿರ್ವಹಿಸುವಲ್ಲಿ ತಂದಿರುವ ನಿಯಮಗಳ ಪಾಲನೆ ಮಾಡಲಾಗದ ಸ್ಥಿತಿಯಲ್ಲಿ ಕಾರ್ಯಕರ್ತೆಯರು ಇದ್ದಾರೆ. ಹೆಚ್ಚಿನ ಕಾರ್ಯ ಒತ್ತಡದಲ್ಲಿ ಸಿಲುಕಿ ಅನೇಕ ಕಾರ್ಯಕರ್ತೆಯರು ಪ್ರಾಣ ಕಳೆದುಕೊಂಡಿದ್ದಾರೆ. ಹೊಸದಾಗಿ ತಂದಿರುವ ನಾಲ್ಕು ಸಂಹಿತೆಗಳನ್ನು ರದ್ದುಗೊಳಿಸಲು ಆಗ್ರಹಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಅಬ್ದುಲ್ ಮುನಾಫ್, ಶಾಂತಕುಮಾರಿ, ರಾಜು ವೆಂಕಟಪ್ಪ ಮಾತನಾಡಿದರು. ಪದಾಧಿಕಾರಿಗಳಾದ ಸೌಭಾಗ್ಯಮ್ಮ, ಇಂದಿರಾ, ಕುಣಿಗಲ್ ಕುದುರೆ ಫಾರಂ, ಬೀಡಿ ಕಾರ್ಮಿಕರ ಸಂಘ, ಬಿಸಿಯೂಟ ನೌಕರರ ಸಂಘ, ಗ್ರಾಮ ಪಂಚಾಯಿಒತಿ ನೌಕರರ ಸಂಘ, ದಲಿತ ಹಕ್ಕುಗಳ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

ಅಟೋ ಚಾಲಕನ ಮೇಲಿನ ಹಲ್ಲೆ ಖಂಡಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಅಂಗನವಾಡಿ ಕಾರ್ಯಕರ್ತೆ

ಪೊಲೀಸರೊಂದಿಗೆ ಜಟಾಪಟಿ

ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರವಾಸಿ ಮಂದಿರದಿಂದ ಹುಚ್ಚಮಾಸ್ತಿಗೌಡ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದು ಮಾನವ ಸರಪಣಿ ನಿರ್ಮಿಸಿ ಪ್ರತಿಭಟಿಸುವಾಗ ನಾಲ್ಕು ಕಡೆಗಳಿಂದ ಬಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಆಗ ಪೊಲೀಸರು ಪ್ರತಿಭಟನೆಗೆ ನೀಡಿದ ಸಮಯ ಮುಗಿದಿದೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಅದು ಪ್ರಯೋಜನವಾಗದ ಕಾರಣ ವೃತ್ತದ ಮಧ್ಯದಲ್ಲಿ ಪ್ರಚಾರಕ್ಕೆಂದು ಧ್ವನಿವರ್ಧಕ ಅಳವಡಿಸಿ ತಂದಿದ್ದ ಆಟೊ ಚಾಲಕನಿಗೆ ತೆರವು ಮಾಡಲು ಸೂಚಿಸಿದರು. ತಡಮಾಡಿದ ಆಟೊ ಚಾಲಕನಿಗೆ ಪೊಲೀಸರು ಹೊಡೆದ ಪರಿಣಾಮ ಅಂಗನವಾಡಿ ಕಾರ್ಯಕರ್ತೆಯರು ಪೊಲೀಸರ ವಿರುದ್ಧ ತಿರುಗಿ ಬಿದ್ದರು. ಪ್ರತಿಭಟನೆ ಹತ್ತಿಕ್ಕುವ ಕಾರ್ಯ ಮಾಡಬೇಡಿ ಆಟೊ ಚಾಲಕನ ಮೇಲೆ ಹಲ್ಲೆ ಮಾಡುವ ಬದಲು ಸಂಘಟನೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.