ADVERTISEMENT

ಯುಜಿಡಿ ತ್ಯಾಜ್ಯ ಈಚನೂರು ಕೆರೆಗೆ ಹರಿಯದಂತೆ ತಡೆಯಲು ಮನವಿ 

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 16:36 IST
Last Updated 3 ಜೂನ್ 2023, 16:36 IST
ಯುಜಿಡಿ ತ್ಯಾಜ್ಯ ಈಚನೂರು ಕೆರೆಗೆ ಹರಿಯದಂತೆ ತಡೆಯಲು ಒತ್ತಾಯಿಸಿ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ತಿಪಟೂರಿನಲ್ಲಿ ಮನವಿ ಸಲ್ಲಿಸಿದರು
ಯುಜಿಡಿ ತ್ಯಾಜ್ಯ ಈಚನೂರು ಕೆರೆಗೆ ಹರಿಯದಂತೆ ತಡೆಯಲು ಒತ್ತಾಯಿಸಿ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ತಿಪಟೂರಿನಲ್ಲಿ ಮನವಿ ಸಲ್ಲಿಸಿದರು    

ತಿಪಟೂರು: ನಗರದ ರಾಜಕಾಲುವೆ ನೀರಿಗೆ ಮಳೆನೀರು ಸೇರಿ ಕೋಡಿ ವೃತ್ತದ ಬಳಿ ಮ್ಯಾನ್‌ಹೋಲ್ ತೆರೆದು ಚರಂಡಿಯ ನೀರು ಹೇಮಾವತಿ ನಾಲೆಗೆ ಸೇರುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನಿಯೋಗ ನಗರಸಭೆ ಆಯುಕ್ತರನ್ನು ಭೇಟಿ ಮಾಡಿ ಶನಿವಾರ ಮನವಿ ಸಲ್ಲಿಸಿತು.

ಪಕ್ಷದ ಎಸ್.ಎನ್.ಸ್ವಾಮಿ ಮಾತನಾಡಿ, ಕಲುಷಿತ ನೀರು ಹೇಮಾವತಿ ನಾಲೆಯ ಮೂಲಕ ಈಚನೂರು ಕೆರೆ ಸೇರುತ್ತದೆ. ಇದರಿಂದ ನಗರಕ್ಕೆ ಕಲುಷಿತ ನೀರು ಸರಬರಾಜು ಆಗುವ ಅಪಾಯವಿದೆ. ಯುಜಿಡಿ ಸಂಸ್ಕರಣೆಗೊಂಡ ನೀರು ಹೂವಿನ ಕಟ್ಟೆ ತುಂಬುತ್ತಿದ್ದು, ಕೃಷಿ ಕೆಲಸಗಳಿಗೆ ನೀರು ಉಪಯೋಗವಾಗುತ್ತಿದೆ. ಆದರೆ ಅಲ್ಲಿ ದುರ್ವಾಸನೆ ಬರುತ್ತಿದ್ದು ನೀರು ಸಂಪೂರ್ಣವಾಗಿ ಶುದ್ಧೀಕರಣವಾಗಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಅಂತರ್ಜಲಕ್ಕೇ ಕಲುಷಿತ ನೀರು ಸೇರಿಕೊಂಡು ರೋಗಗಳ ವಿತರಣಾ ಕೆಂದ್ರಗಳಾಗುತ್ತವೆ. ಆದ್ದರಿಂದ ಕೋಡಿ ವೃತ್ತದ ಬಳಿ ಮ್ಯಾನ್‌ಹೋಲ್‌ನಿಂದ ಹರಿಯುವ ಚರಂಡಿ ನೀರನ್ನು ನಿಲ್ಲಿಸಬೇಕು. ಯುಜಿಡಿ ನೀರನ್ನು ಸರಿಯಾಗಿ ಶುದ್ಧೀಕರಿಸಬೇಕು ಎಂದರು.

ನಗರ ಆಯುಕ್ತ ವಿಶ್ವೇಶ್ವರ ಪ್ರತಿಕ್ರಿಯಿಸಿ, ಮ್ಯಾನ್‌ಹೋಲ್‌ನಿಂದ ಹರಿಯುವ ಕಲುಷಿತ ನೀರನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗುವುದು. ಕೃಷಿಯ ಮೇಲೆ ಯುಜಿಡಿಯ ಸಂಸ್ಕಾರಗೊಂಡ ನೀರಿನ ಪರಿಣಾಮವನ್ನು ಸಂಬಂಧಪಟ್ಟ ಇಲಾಖೆ ಮೂಲಕ ಮಾಡಿಸಿ ನೋಡಲಾಗುವುದು. ಕೆಂಚರಾಯನಗರದ ಬಳಿ ಇರುವ ಘನತ್ಯಾಜ್ಯ ಘಟಕದ ಸುತ್ತ ಕಾಂಪೌಂಡ್ ಕಟ್ಟಲು ಮತ್ತು ಹಳೆ ತ್ಯಾಜ್ಯ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಬಿ.ಲೋಕೇಶ್, ರಂಗಧಾಮಯ್ಯ, ಗೋಪಿನಾಥ್ ಬೊಮ್ಮನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.