ADVERTISEMENT

ತುಮಕೂರು| ಮುಂದುವರಿದ ‘ಆಶಾ’ ಧರಣಿ

ಮಾಸಿಕ ₹12,000 ಗೌರವಧನ, ಕೊರೊನಾ ಹೋರಾಟಕ್ಕೆ ಸುರಕ್ಷಾ ಸಾಮಗ್ರಿ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 16:04 IST
Last Updated 24 ಜುಲೈ 2020, 16:04 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದರು
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದರು   

ತುಮಕೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹ 12,000 ಗೌರವಧನ ಖಾತರಿಪಡಿಸಬೇಕು, ಕೊರೊನಾ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷಾ ಸಾಮಗ್ರಿಗಳನ್ನು ನೀಡುವಂತೆ ಆಗ್ರಹಿಸಿ ಕಳೆದ 15 ದಿನಗಳಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಧರಣಿ ಮುಂದುವರಿದಿದೆ.

ಜಿಲ್ಲಾಧಿಕಾರಿ ಕಚೇರಿ ಮುಂದೆಶುಕ್ರವಾರ ಪ್ರತಿಭಟಿಸಿದ ಕಾರ್ಯಕರ್ತೆಯರು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು. ಕೊರೊನಾಗೆ ತುತ್ತಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ, ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.

ಕಳೆದ 15 ದಿನಗಳಿಂದ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಧರಣಿನಡೆಸಿ ಜಿಲ್ಲಾಧಿಕಾರಿ, ತಹಶೀಲ್ದಾರ್, ಹಲವು ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಬೇಡಿಕೆಗಳ ಕುರಿತು ಸರ್ಕಾರದಲ್ಲಿ ಚರ್ಚೆ ನಡೆಯುತ್ತಿದ್ದು, ಎರಡು ಮೂರು ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಕಳೆದ 4 ದಿನಗಳ ಹಿಂದೆ ಸಚಿವ ಡಾ.ಸುಧಾಕರ್ ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ದೊರೈರಾಜು ಮಾತನಾಡಿ, ‘ಆಶಾ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ. ಗುತ್ತಿಗೆ, ಹೊರಗುತ್ತಿಗೆ ಸೇವೆಗೆ ಕನಿಷ್ಠ ಗೌರವಧನ ಕೊಡದೇ ಇರುವುದು ಅತ್ಯಂತ ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‍ಯುಸಿಐ ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಕದಂಬ ಕನ್ನಡ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ನಾಗರಾಜು, ಅಧ್ಯಕ್ಷ ಅನಿಲ್ ಕುಮಾರ್, ಅಖಿಲ ಭಾರತಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಘಟಕಿ ಟಿ.ಇ.ಅಶ್ವಿನಿ ಮಾತನಾಡಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ (ಎಐಯುಟಿಯುಸಿ) ಜಿಲ್ಲಾ ಸಂಘಟಕಿ ಮಂಜುಳಾ ಗೋನವಾರ, ತುಮಕೂರು ತಾಲ್ಲೂಕು ಘಟಕದ ಅಧ್ಯಕ್ಷೆ ಪದ್ಮರೇಖಾ, ಸುಜಾತಾ, ಚಂದ್ರಕಲಾ, ಸೌಮ್ಯ, ಓಬಮ್ಮ, ಶಾರದಾ, ರೂಪಾ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.