ತುಮಕೂರು: ಎಂಬಿಎ, ಎಂಸಿಎ ಕೋರ್ಸ್‌ಗಳ ಪ್ರವೇಶಕ್ಕೆ ಭಾನುವಾರ ನಡೆದ ಪಿಜಿ ಸಿಇಟಿ ಆರಂಭದಲ್ಲಿ ಕೆಲವು ಕೇಂದ್ರಗಳಲ್ಲಿ ಗೊಂದಲ ಉಂಟಾಯಿತು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಕೇಂದ್ರಕ್ಕೆ ಜೀನ್ಸ್ ಧರಿಸಿ ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಕೇಂದ್ರದ ಒಳಗಡೆ ಬಿಡಲಿಲ್ಲ.
ದೂರದ ಹಾಸ್ಟೆಲ್‌ಗಳಿಂದ ಪರೀಕ್ಷೆ ಬರೆಯಲು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಕೇಂದ್ರದ ಒಳಗಡೆ ಹೋಗಲು ಸಾಧ್ಯ ಆಗದೆ ಸಪ್ಪೆ ಮೊರೆ ಹಾಕಿಕೊಂಡು ಕಾಲೇಜು ಗೇಟ್ ಬಳಿ ನಿಂತಿದ್ದರು. ಸಾಮಾಜಿಕ ಕಾರ್ಯಕರ್ತ, ಆಟೊ ಚಾಲಕ ಕೆ.ಎಂ.ಶಿವಕುಮಾರ್ ವಿದ್ಯಾರ್ಥಿನಿಯರನ್ನು ವಿಚಾರಿಸಿದರು.
‘ಜೀನ್ಸ್ ಧರಿಸಿ ಬಂದಿದ್ದಕ್ಕೆ ಪ್ರವೇಶ ನೀಡುತ್ತಿಲ್ಲ. ಹಾಸ್ಟೆಲ್‌ಗಳು ಇಲ್ಲಿಂದ ನಾಲ್ಕೈದು ಕಿಲೋ ಮೀಟರ್ ದೂರದಲ್ಲಿವೆ. ಹಾಸ್ಟೆಲ್‌ಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರಲು ಸಮಯ ಸಾಕಾಗಲ್ಲ. ಹೊಸ ಬಟ್ಟೆ ಖರೀದಿಸಲು ಹಣವಿಲ್ಲ’ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.
ಶಿವಕುಮಾರ್ ಕೂಡಲೇ ಇಬ್ಬರನ್ನೂ ಸಮೀಪದ ಬಟ್ಟೆ ಅಂಗಡಿಗೆ ಕರೆದೊಯ್ದು ಹೊಸ ಬಟ್ಟೆ ಖರೀದಿಸಿ ಕೊಟ್ಟು, ಪರೀಕ್ಷಾ ಕೇಂದ್ರಕ್ಕೆ ತಂದು ಬಿಟ್ಟರು.
‘ವಿದ್ಯಾರ್ಥಿನಿಯರು ತುಂಬಾ ಆತಂಕದಲ್ಲಿದ್ದರು. ವಿಚಾರಿಸಿದಾಗ ವಿಷಯ ತಿಳಿಯಿತು. ಕೂಡಲೇ ಇಬ್ಬರನ್ನೂ ಕರೆದೊಯ್ದು ಬಟ್ಟೆ ಖರೀದಿಸಿ ಕೊಟ್ಟು, ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಬಂದೆ’ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.
‘ಪರೀಕ್ಷೆಗೆ ಜೀನ್ಸ್ ಹಾಕಿಕೊಂಡು ಬರಬಾರದು ಎಂಬ ನಿರ್ಬಂಧ ಇರಲಿಲ್ಲ. ಇಲ್ಲಿಗೆ ಬಂದಾಗ ಪೊಲೀಸರು ಕೇಂದ್ರದ ಒಳಗಡೆ ಬಿಡಲಿಲ್ಲ. ಸಮಯಕ್ಕೆ ಸರಿಯಾಗಿ ಶಿವಕುಮಾರ್ ಅವರು ಬಂದಿದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಯಿತು. ವಸ್ತ್ರಸಂಹಿತೆ ಬಗ್ಗೆ ಮೊದಲೇ ತಿಳಿಸಿದರೆ ವಿದ್ಯಾರ್ಥಿಗಳಿಗೂ ಅನುಕೂಲವಾಗು ತ್ತದೆ. ಮುಂದಿನ ದಿನಗಳಲ್ಲಿ ಪ್ರವೇಶ ಪತ್ರದಲ್ಲಿ ಎಲ್ಲ ಮಾಹಿತಿ ನೀಡಲಿ’ ಎಂದು ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮಿ, ಕೀರ್ತನಾ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.