ADVERTISEMENT

ಧರ್ಮದ ಹೆಸರಿನಲ್ಲಿ ಸಮಾನತೆ ಹಾಳು: ಬರಗೂರು ರಾಮಚಂದ್ರಪ್ಪ

‘ಸಮತಾ ಸೌಹಾರ್ದ ಗೀತಗಾಯನ’ ವೆಬಿನಾರ್‌ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 16:21 IST
Last Updated 13 ಸೆಪ್ಟೆಂಬರ್ 2020, 16:21 IST
ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ ‘ಸಮತಾ ಸೌಹಾರ್ದ ಗೀತಗಾಯನ’ ವೆಬಿನಾರ್‌ ಕಾರ್ಯಕ್ರಮಕ್ಕೆ ಲಕ್ಷ್ಮಣದಾಸ್ ಚಾಲನೆ ನೀಡಿದರು
ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ ‘ಸಮತಾ ಸೌಹಾರ್ದ ಗೀತಗಾಯನ’ ವೆಬಿನಾರ್‌ ಕಾರ್ಯಕ್ರಮಕ್ಕೆ ಲಕ್ಷ್ಮಣದಾಸ್ ಚಾಲನೆ ನೀಡಿದರು   

ತುಮಕೂರು: ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಇಂದು ಸಮಾನತೆ ಮತ್ತು ಸಹಿಷ್ಣುತೆಯ ಆದರ್ಶಗಳನ್ನು ಹಾಳುಮಾಡುವ ಪ್ರಯತ್ನಗಳು ಕೆಲವರಿಂದ ನಡೆಯುತ್ತಿವೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕವು ಭಾನುವಾರ ಆಯೋಜಿಸಿದ್ದ ‘ಸಮತಾ ಸೌಹಾರ್ದ ಗೀತಗಾಯನ’ ವೆಬಿನಾರ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಹಿಂದಿನಿಂದಲೂ ಸಮತೆ ಮತ್ತು ಸೌಹಾರ್ದದ ದನಿಯೊಂದು ವಿನಾಶಕಾರಿ ವಿಷಯಗಳನ್ನು ಹಿಮ್ಮೆಟ್ಟಿಸುತ್ತ ಗಟ್ಟಿಯಾಗಿ ಅಭಿವ್ಯಕ್ತಿಗೊಳ್ಳುತ್ತಿದೆ. ಈ ಕಾರ್ಯಕ್ರಮವು ಕನ್ನಡ ಸಾಹಿತ್ಯದ ಸಮತಾ ಸೌಹಾರ್ದ ವಿವೇಕಕ್ಕೆ ಗಾಯನ ರೂಪದಲ್ಲಿ ಸಹದನಿಯಾಗಿ ಸ್ಪಂದಿಸಲಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ಆಶಿಸಿದರು.

ADVERTISEMENT

ಪ್ರಜಾಪ್ರಭುತ್ವದಲ್ಲಿ ಪಂಚೇಂದ್ರಿಯ ಜಾಗೃತ ಅವಸ್ಥೆ ಬಹುಮುಖ್ಯ. ಅಂದರೆ, ನಮ್ಮ ಕಣ್ಣು, ಕಿವಿ, ನಾಲಿಗೆ, ಸ್ಪರ್ಶೇಂದ್ರಿಯ, ವಾಸನೇಂದ್ರಿಯಗಳು ಸ್ವತಂತ್ರವಾಗಿ ನಮ್ಮ ವಿವೇಕಕ್ಕೆ ದಕ್ಕಿದಂತೆ ತಮ್ಮ ಹಕ್ಕುಗಳನ್ನು ಸ್ಥಾಪಿಸುವಂತಿರಬೇಕು. ನಮ್ಮ ಕಿವಿಗಳು ನಮ್ಮದೇ ಆಗಿದ್ದರೆ ಅನರ್ಥಕಾರಿ ಆಳುವ ವರ್ಗಕ್ಕೆ ಕಿವಿಗೊಡುವುದಿಲ್ಲ, ಅಂತೆಯೇ ನಮ್ಮ ಕಣ್ಣುಗಳು ದುಷ್ಟ ಕೂಟದ ದೃಷ್ಟಿಕೋನ ಆಗುವುದಿಲ್ಲ. ನಮ್ಮ ನಾಲಿಗೆ ಆಯತಪ್ಪಿ ಸೌಹಾರ್ದ ಹಾಳು ಮಾಡುವುದಿಲ್ಲ. ವಾಸನೇಂದ್ರಿಯ ಮತ್ತು ಸ್ಪರ್ಶೇಂದ್ರಿಯಗಳು ಸಾಮಾಜಿಕ ಸರ್ವಾಧಿಕಾರದ ಸಾಧನ ಆಗುವುದಿಲ್ಲ ಎಂದು ನುಡಿದರು.

ಅಸಮಾನತೆ, ಅಸ್ಪೃಶ್ಯತೆ, ಅಸಹಿಷ್ಣುತೆಗಳಿಗೆ ಪ್ರತಿರೋಧ ಒಡ್ಡುವ ಪಂಚೇಂದ್ರಿಯಗಳು ನಮ್ಮದಾಗಬೇಕು. ನಮ್ಮ ಪಂಚೇಂದ್ರಿಯಗಳು ಸಂವಿಧಾನಾತ್ಮಕವಾದ ಸಮತೆ ಮತ್ತು ಸೌಹಾರ್ದತೆಗಳ ಸಂವೇದನೆಯ ನೆಲೆಗಳಾಗಬೇಕು ಎಂದರು.

ಹಿರಿಯ ರಂಗಕರ್ಮಿ ಲಕ್ಷ್ಮಣದಾಸ್ ವೆಬಿನಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಶೇಖರ್, ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕರಾದ ಡಾ.ಓ.ನಾಗರಾಜು, ಡಾ.ನಾಗಭೂಷಣ ಬಗ್ಗನಡು, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಇದ್ದರು.

ಕಾರ್ಯಕ್ರಮದಲ್ಲಿ ಕುವೆಂಪು ಸೇರಿದಂತೆ ಸಮಕಾಲೀನ ಸಾಹಿತಿಗಳ ಕವಿತೆಗಳನ್ನು ಹಲವು ಗಾಯಕರು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.