ADVERTISEMENT

‘ಸಂಘರ್ಷದ ಸಂಕಲ್ಪದಿನ’ ಉಪವಾಸ ಸತ್ಯಾಗ್ರಹ

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 2:17 IST
Last Updated 31 ಜನವರಿ 2021, 2:17 IST
ತುಮಕೂರಿನಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಮುಖಂಡರು
ತುಮಕೂರಿನಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಮುಖಂಡರು   

ತುಮಕೂರು: ಕೃಷಿ ಕಾಯ್ದೆಗಳ ತಿದ್ದುಪಡಿ ವಾಪಸ್‌ಗೆ ಆಗ್ರಹಿಸಿ ಮತ್ತು ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಮೇಲಿನ ದಾಳಿ ಖಂಡಿಸಿ ನಗರದಲ್ಲಿ ಜನಪರ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಸಮಿತಿ ನೇತೃತ್ವದಲ್ಲಿ ‘ಸಂಘರ್ಷದ ಸಂಕಲ್ಪದಿನ’ ಹೆಸರಿನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಸಾಮಾಜಿಕ ಹೋರಾಟಗಾರ ಕೆ.ದೊರೈರಾಜ್ ಮಾತನಾಡಿ, ‘ರೈತರ ಪ್ರತಿಭಟನೆಗೆ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ. ಇದು ಸರ್ವಾಧಿಕಾರದ ಧೋರಣೆ. ಜನಪರವಾಗಿ ಕೆಲಸ ಮಾಡಬೇಕಾಗಿದ್ದ ಸರ್ಕಾರ, ಬಂಡವಾಶಾಹಿ ವ್ಯವಸ್ಥೆ ಬಲಪಡಿಸಲು ಹೊರಟಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಅರುಂಧತಿ ಮಾತನಾಡಿ, ‘ಮಹಾತ್ಮ ಗಾಂಧೀಜಿ ಅವರನ್ನು ಕೊಂದ ಶಕ್ತಿಗಳೇ ಈಗ ಕೇಂದ್ರ ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದಿವೆ. ವಾಮಮಾರ್ಗದಿಂದ ಅಧಿಕಾರ ಹಿಡಿದು ಜನರನ್ನು ಹಿಂಸಿಸುತ್ತಿವೆ. ಇವರಿಗೆ ಅಧಿಕಾರ ಬೇಕೇ ಹೊರತು ರೈತರ ಹಿತ ಮುಖ್ಯವಲ್ಲ’ ಎಂದು ಟೀಕಿಸಿದರು.

ADVERTISEMENT

ಎರಡು ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಅವರ ಬಗ್ಗೆ ಕನಿಷ್ಠ ಕಾಳಜಿ ತೋರಿಸುತ್ತಿಲ್ಲ. ಕೇಂದ್ರ ಸರ್ಕಾರ ಜನರನ್ನು ಜೀವಂತ ಶವಗಳಾಗಿ ಮಾಡಲು ಹೊರಟಿದೆ. ಕುಟಿಲತೆ ಕೇಂದ್ರ ಸರ್ಕಾರದ ನಡೆಯಾಗಿದೆ. ಇಂತಹ ನೀತಿಯನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು
ಆಗ್ರಹಿಸಿದರು.

ಸರ್ಕಾರವನ್ನು ಪ್ರಶ್ನಿಸುವವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಮಾಧ್ಯಮಗಳು ಕೂಡ ಕೇಂದ್ರದ ತಾಳಕ್ಕೆ ಕುಣಿಯುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

ಹೋರಾಟಗಾರ ಸಿ.ಯತಿರಾಜು, ‘ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತರು ಕೆಲಸ ಮಾಡುತ್ತಿದೆ. ರೈತರು ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರೆ ಪ್ರಧಾನಿ ಕಿವಿಗೊಡುತ್ತಿಲ್ಲ’ ಎಂದು ಕಿಡಿಕಾರಿದರು.

ಜನವಿರೋಧಿ ಕಾಯ್ದೆಗಳ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳು ಎಂದು ಕರೆದು ಜನರನ್ನು ದಿಕ್ಕುತಪ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ರೈತರು, ಪ್ರಗತಿಪರರೊಂದಿಗೆ ಅಮಾನವೀ ಯವಾಗಿ ನಡೆದುಕೊಳ್ಳುತ್ತಿದೆ
ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ಉತ್ತರ ಪ್ರದೇಶ ಸರ್ಕಾರ ಚಳವಳಿಗೆ ಅಡ್ಡಿಪಡಿಸಲು ಹೋರಾಟ ಸ್ಥಳದಲ್ಲಿ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಇದು ಖಂಡನೀಯ. ಬಿಜೆಪಿ ರೈತ ಸಂಘಟನೆಗಳಲ್ಲೇ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಡಾ.ಬಸವರಾಜು, ಸಾಹಿತಿ ನಟರಾಜ್ ಬೂದಾಳ್, ರೈತ ಮುಖಂಡ ಅಜ್ಜಪ್ಪ, ಯುವಜನ ಸಂಘಟನೆಯ ಮಂಜುಳಾ, ಆಶ್ವಿನಿ, ನವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.