ಶಿರಾ: ಭದ್ರಾ ಮೇಲ್ದಂಡೆ ನಾಲೆ ಕಾಮಗಾರಿ ಕೈಗೊಳ್ಳಲು ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ರೈತರಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಟಿ.ಬಿ.ಜಯಚಂದ್ರ ಸೂಚಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಹಿಂದೆ ನಾನು ಸಚಿವನಾಗಿದ್ದ ಸಮಯದಲ್ಲಿ ಶಿರಾ ತಾಲ್ಲೂಕಿಗೆ ಅನುಕೂಲವಾಗುವಂತೆ ತುಮಕೂರು ನಾಲೆಯನ್ನು ಮಂಜೂರು ಮಾಡಿಸಲಾಯಿತು. 41 ಕೆರೆಗಳಿಗೆ ಶೇ50ರಷ್ಟು ನೀರು ತುಂಬಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದವರು 65 ಕೆರೆಗಳಿಗೆ ಶೇ32ರಷ್ಟು ನೀರು ತುಂಬಿಸುವಂತೆ ಯೋಜನೆ ಮಾರ್ಪಾಡು ಮಾಡಿದ್ದಾರೆ. ಇದರಿಂದ ಕೆರೆಯಲ್ಲಿರುವ ಗುಂಡಿ ತುಂಬಿಸಲು ಸಾಧ್ಯವಿಲ್ಲ. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ’ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಏತ ನೀರಾವರಿ ಮೂಲಕ ತಿಪಟೂರು ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗಲು ಹಿಂದೆ ಅಧಿಕಾರದಲ್ಲಿದ್ದವರು ಯೋಜನೆ ರೂಪಿಸಿದ್ದಾರೆ. ಇದರಿಂದ ಶಿರಾಕ್ಕೆ ತೊಂದರೆಯಾಗುವುದು ಯಾವುದೇ ಕಾರಣಕ್ಕೂ ಏತ ನೀರಾವರಿ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದರು.
ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಿ. ನಮ್ಮಲ್ಲಿ ಇಂತಹ ಪ್ರಕರಣ ನಡೆಯದಂತೆ ಎಚ್ಚರ ವಹಿಸುವಂತೆ ಬಿಇಒ, ಸಿಡಿಪಿಒ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಬೀದಿ ನಾಯಿಗಳನ್ನು ನಿಯಂತ್ರಿಸಿ: ಬೀದಿ ನಾಯಿಗಳ ಹಾವಳಿ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಕುಡಿಯುವ ನೀರು: ಕೈಗಾರಿಕೋದ್ಯಮಿಗಳು ಶಿರಾ ಕಡೆ ಮುಖ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ನೀರಿನ ಸಮಸ್ಯೆ ಇದೆ ಎನ್ನುವ ಪ್ರಶ್ನೆ ಬರಬಾರದು. ತಾಲ್ಲೂಕಿನ 12 ಕಡೆ ನೀರಿನ ಸಮಸ್ಯೆ ಇದ್ದು ತಕ್ಷಣ ಬಗೆಹರಿಸಿ ಯಾರು ನನ್ನ ಬಳಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ದೂರು ತರಬಾರದು ಎಂದರು.
ಕಾರ್ಮಿಕ ಭವನ: ನಗರದಲ್ಲಿ ಕಾರ್ಮಿಕ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಎಕರೆ ಜಮೀನು ನೀಡಲಾಗುವುದು. ಈಗಾಗಲೇ ಕಾರ್ಮಿಕ ಸಚಿವರು ₹10ಕೋಟಿ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮುಂದಾಗಬೇಕು ಎಂದರು.
ನಗರದ ಸರ್ಕಾರಿ ಆಸ್ಪತ್ರೆಗೆ ರೋಗಿಗಳ ಜೊತೆಯಲ್ಕಿ ಬರುವವರು ಇರಲು ಅನುಕೂಲವಾಗುವಂತೆ ₹40ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು. ಜತೆಗೆ ತಾಯಿ ಮತ್ತು ಮಕ್ಖಳ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಬರುತ್ತಿದ್ದು ತಲಾ 50 ಹಾಸಿಗೆ ಹೆಚ್ಚು ಮಾಡಲಾಗುವುದು ಎಂದರು.
ಜೆಜೆಎಂ ಯೋಜನೆಯಲ್ಲಿ ತಾಲ್ಲೂಕಿಗೆ 387 ಕಾಮಗಾರಿ ಮಂಜೂರಾಗಿದ್ದು ಅದರಲ್ಲಿ 347 ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಈಗಾಗಲೇ ₹39.78 ಕೋಟಿ ಬಿಲ್ ನೀಡಿದ್ದು ₹15 ಕೋಟಿ ಬಿಲ್ ಬಾಕಿ ಇದೆ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಮಂಜು ಪ್ರಸಾದ್ ಹೇಳಿದರು.
ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ತಹಶೀಲ್ದಾರ್ ಆನಂದಕುಮಾರ್, ತಾ.ಪಂ ಇ.ಒ ಹರೀಶ್, ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮಹಮೂದ್, ಸಿಪಿಐ ಮಂಜೇಗೌಡ, ಶ್ರೀನಿವಾಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.