ADVERTISEMENT

ಭಾರತ್‌ ಜೋಡೋದಿಂದ ಕಾಂಗ್ರೆಸ್ ಕನಸು ನನಸಾಗದು: ಸಚಿವ‌ ಕೆ.ಗೋಪಾಲಯ್ಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 6:10 IST
Last Updated 27 ಸೆಪ್ಟೆಂಬರ್ 2022, 6:10 IST
   

ಹಾಸನ: ಅಧಿಕಾರಕ್ಕಾಗಿ ಕಾಂಗ್ರೆಸ್ ಆರಂಭಿಸಿರುವ ಭಾರತ್ ಜೋಡೋ ಪಾದಯಾತ್ರೆ ಯಶಸ್ವಿಯಾಗದು. ಅವರು ಈ ದೇಶದ ಹಾಗೂ ರಾಜ್ಯದ ಚುಕ್ಕಾಣಿ ಹಿಡಿಯಲು ‌ಸಾಧ್ಯವಿಲ್ಲ ಎಂದು ಅಬಕಾರಿ ಹಾಗೂ ಜಿಲ್ಲಾ ‌ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಬರುವ ಚುನಾವಣೆಯಲ್ಲಿ ಎರಡರಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು‌ ನಿಶ್ಚಿತ ಎಂದರು.

ಆತ್ಮ‌ಗೌರವ ಇರುವ ಯಾರೂ ಕೂಡ ಕಾಂಗ್ರೆಸ್ ಗೆ ಹೋಗುವುದಿಲ್ಲ. ಯಾವುದೇ ಸವಾಲು ಬಂದರೂ ನಮ್ಮ ಸರ್ಕಾರ ಎದುರಿಸಲು ಸಿದ್ಧವಿದೆ. ಮೋದಿ ಮತ್ತು ಬಸವರಾಜ್ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಪಕ್ಷ ಸದೃಢವಾಗಿದೆ ಎಂದು ಹೇಳಿದರು.

ADVERTISEMENT

ಕೋವಿಡ್ ಸಂದರ್ಭದಲ್ಲಿ ನಮ್ಮ ಕೇಂದ್ರ ಸರ್ಕಾರ ಮಾಡಿದ ಕೆಲಸವನ್ನು ಇಡೀ ಜಗತ್ತೆ ನೋಡುತ್ತಿದೆ. ದೇಶದ ವಿಜ್ಞಾನಿಗಳಿಗೆ ಕರೆ ನೀಡಿ, ಒಂದೇ ವರ್ಷದಲ್ಲಿ ವ್ಯಾಕ್ಸಿನ್ ಸಂಶೋಧನೆ ಮಾಡಿರುವುದು ಸಾಮಾನ್ಯವಾದ ವಿಚಾರವಲ್ಲ. ನಮ್ಮ ದೇಶದ ಜನರಿಗೆ ನೀಡಿದ್ದಲ್ಲದೇ ಬೇಡಿಕೆ‌ ಇರುವ ಇತರೆ ದೇಶಗಳಿಗೂ ವ್ಯಾಕ್ಸಿನ್ ರವಾನಿಸಿದ‌ ಕೀರ್ತಿ ಪ್ರಧಾನ ಮಂತ್ರಿಗಳಿಗೆ ಸಲ್ಲುತ್ತದೆ ಎಂದರು.

ವಿನಾಕಾರಣ ಕಮಿಷನ್ ನೀಡಿರುವುದಾಗಿ‌ ಅನೇಕರು‌ ನೀಡುತ್ತಿರುವ ಹೇಳಿಕೆಗೆ ದಾಖಲೆ ನೀಡಬೇಕು.‌ ಅದನ್ನು ಬಿಟ್ಟು ಮಾಧ್ಯಮಗಳಲ್ಲಿ ಮುಖ‌ ತೋರಿಸುವ ಸಲುವಾಗಿ ಇಲ್ಲದ ಹೇಳಿಕೆ ನೀಡಬಾರದು. ಯಾರು ಯಾರಿಗೆ ಕೊಟ್ಟರು, ಯಾಕೆ ಕೊಟ್ಟರು, ಎಷ್ಟು ಕೊಟ್ಟರು ಎನ್ನುವುದನ್ನು ಬಹಿರಂಗಪಡಿಸಬೇಕು. ಹಾಗೆಯೆ ಕೊಡುವವರಿಗೆ ಕೋಟ್ಯಂತರ ರೂಪಾಯಿ ಹೇಗೆ ಬಂತು ಎಂಬ ಬಗ್ಗೆ ‌ಕೂಡ‌ ತನಿಖೆಯಾಗಬೇಕು ಎಂದರು.

ಈ ವೇಳೆ ನಗರದ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ.ನಾಗರಾಜ್, ಉದ್ಯಮಿ ಕಿರಣ್ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.