ADVERTISEMENT

ತುಮಕೂರು | ಬಿಜೆಪಿಯಲ್ಲಿ ತೀವ್ರಗೊಂಡ ಬಣ ರಾಜಕೀಯ: ಕಾರ್ಯಕರ್ತರ ಸ್ಥಿತಿ ಅತಂತ್ರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:04 IST
Last Updated 17 ಸೆಪ್ಟೆಂಬರ್ 2025, 5:04 IST
   

ತುಮಕೂರು: ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಬಣ ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಾಯಕರ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಗಿದೆ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಯಕರ ನಡುವಿನ ‘ಪ್ರತಿಷ್ಠೆ’ಯಿಂದಾಗಿ ಕಾರ್ಯಕರ್ತರು ಹತಾಶರಾಗಿದ್ದು, ಯಾವ ಗುಂಪಿನಲ್ಲಿ ಗುರುತಿಸಿಕೊಳ್ಳಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಒಂದು ಗುಂಪಿನಲ್ಲಿ ಗುರುತಿಸಿಕೊಂಡರೆ ಮತ್ತೊಂದು ಗುಂಪಿನವರಿಗೆ ಸಿಟ್ಟು ಬರುತ್ತದೆ. ಇಂತಹ ಗೊಂದಲದ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬ ತೊಳಲಾಟದಲ್ಲಿ ಇದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮ ದಿನಾಚರಣೆಯನ್ನು ಪ್ರತ್ಯೇಕವಾಗಿ ಹಮ್ಮಿಕೊಳ್ಳುವ ಮೂಲಕ ಬಣ ರಾಜಕೀಯ ಬೀದಿಗೆ ಬಂದಿದೆ. ಪಕ್ಷದ ವತಿಯಿಂದ ನಗರದ ವಿಶ್ವವಿದ್ಯಾಲಯ ಎದುರು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ರೈಲ್ವೆ ಖಾತೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಆರೋಗ್ಯ ತಪಾಸಣೆ ರಕ್ತದಾನ ಶಿಬಿರವನ್ನು ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ. ಸೋಮಣ್ಣ ಹಮ್ಮಿಕೊಂಡಿರುವ ಕಾರ್ಯಕ್ರಮದ ಪ್ರಚಾರ ಫಲಕಗಳಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು, ಅಧ್ಯಕ್ಷರ ಹೆಸರು, ಭಾವಚಿತ್ರ ಇಲ್ಲದಿರುವುದು ಶಾಸಕರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.

ADVERTISEMENT

ಎರಡು ಬಣಗಳು ಪ್ರತ್ಯೇಕವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಯಾವುದರಲ್ಲಿ ಭಾಗವಹಿಸಬೇಕು ಎಂಬ ಗೊಂದಲಕ್ಕೆ ಕಾರ್ಯಕರ್ತರು ಸಿಲುಕಿದ್ದಾರೆ. ಎರಡು ಕಡೆಯಿಂದಲೂ ಆಹ್ವಾನ ಬಂದಿದೆ. ಯಾವ ಕಡೆಗೆ ಹೋದರೂ ಮತ್ತೊಬ್ಬರಿಗೆ ಸಿಟ್ಟು ಬರುತ್ತದೆ. ಏನು ಮಾಡುವುದು ಎಂಬ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಯಕರ್ತರೊಬ್ಬರು ತಮ್ಮ ಸಂಕಟ ತೋಡಿಕೊಂಡರು.

ಬಣ ಸೃಷ್ಟಿ: ಬಿಜೆಪಿಯಲ್ಲಿ ಹಿಂದೆಯೂ ಬಣ ರಾಜಕಾರಣ ಇತ್ತು. ಆದರೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿ.ಸೋಮಣ್ಣ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿ, ಸಚಿವರಾಗುವವರೆಗೂ ಎಲ್ಲವೂ ಸಹಜವಾಗಿಯೇ ನಡೆದುಕೊಂಡು ಹೋಗುತಿತ್ತು. ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಕಾರ್ಯಕರ್ತರು ಒಟ್ಟಾಗಿಯೇ ಕೆಲಸ ಮಾಡಿ ಗೆಲ್ಲಿಸಿಕೊಂಡಿದ್ದರು. ಸಚಿವರಾದಾಗ ಸಂಭ್ರಮಿಸಿದ್ದರು. ಕೆಲ ಸಮಯ ಸಚಿವರು, ಶಾಸಕರು ಒಟ್ಟಿಗೆ ಸಾಗಿದ್ದರು. ಸಚಿವರು, ಶಾಸಕರ ಜೋಡಿ ಕಂಡ ವಿರೋಧ ಪಕ್ಷದವರಿಗೆ ಹೊಟ್ಟೆಕಿಚ್ಚು ತರಿಸಿತ್ತು.

ಆದರೆ, ಇತ್ತೀಚಿನ ದಿನಗಳಲ್ಲಿ ಸೋಮಣ್ಣ ಹಾಗೂ ಜಿಲ್ಲೆಯ ಶಾಸಕರಾದ ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ರವಿಶಂಕರ್ ನಡುವೆ ಅಂತರ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಹಿಂದಿನಿಂದಲೂ ಪಕ್ಷ ಕಟ್ಟಿ ಬೆಳೆಸಿದವರು, ಆರ್‌ಎಸ್‌ಎಸ್ ಮುಖಂಡರು ಈ ಎರಡು ಗುಂಪಿನಿಂದ ಅಂತರ ಕಾಯ್ದುಕೊಂಡು ನಿರ್ಲಿಪ್ತ ಸ್ಥಿತಿಯಲ್ಲಿ ಇದ್ದಾರೆ. ಸಚಿವರು– ಶಾಸಕರು ಒಬ್ಬರಿಗೊಬ್ಬರು ಮುಖಕೊಟ್ಟು ಮಾತನಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಇಂತಹುದೇ ನಿರ್ದಿಷ್ಟ ಕಾರಣ ಎಂದು ಹೇಳುವುದು ಕಷ್ಟಕರ. ಸಣ್ಣ ವಿಚಾರವೂ ದೊಡ್ಡದಾಗಿ ಕಾಣುತ್ತಿದೆ. ಮುನಿಸು ಬೆಟ್ಟದಂತೆ ಬೆಳೆದು ನಿಂತಿದೆ.

ಮೂಲ ಬಿಜೆಪಿಯವರು, ವಲಸಿಗರು, ಬಿ.ಎಸ್.ಯಡಿಯೂರಪ್ಪ– ಬಿ.ವೈ.ವಿಜಯೇಂದ್ರ ಬಣ, ಬಸನಗೌಡ ಪಾಟೀಲ ಯತ್ನಾಳ ಬಣಗಳು ಪಕ್ಷದಲ್ಲಿ ಸೃಷ್ಟಿಯಾಗಿವೆ. ಪ್ರಮುಖವಾಗಿ ವಿಜಯೇಂದ್ರ ಬಣ ಹಾಗೂ ಅವರ ವಿರೋಧಿ ಬಣ ಎಂಬಂತಹ ವಾತಾವರಣ ಆಂತರಿಕವಾಗಿ ಕಂಡು ಬರುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಸಮಸ್ಯೆ ಪರಿಹರಿಸಿ ಎಲ್ಲರೂ ಒಟ್ಟಾಗಿ ಹೋಗುವಂತೆ ಮಾಡಬೇಕಿದೆ. ಇಲ್ಲವಾದರೆ ಪರಿಸ್ಥಿತಿ ಮತ್ತಷ್ಟು ಕೈಮೀರುವ ಹಂತ ತಲುಪಿದರೆ ಪಕ್ಷಕ್ಕೆ ಆಗುವ ಹಾನಿ ದೊಡ್ಡಮಟ್ಟದಲ್ಲಿ ಇರಲಿದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.

ಅಧ್ಯಕ್ಷರು ಬರೆದ ಪತ್ರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಅವರು ಸಚಿವ ವಿ.ಸೋಮಣ್ಣ ವಿರುದ್ಧ ಪಕ್ಷದ ಹೈಕಮಾಂಡ್‌ಗೆ ಬರೆದಿದ್ದಾರೆ ಎನ್ನಲಾದ ಪತ್ರ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ರಹಸ್ಯವಾಗಿ ಬರೆದಿದ್ದ ಪತ್ರದ ಪ್ರತಿ ಸೋಮಣ್ಣ ಕೈ ಸೇರಿದ ನಂತರ ಮುನಿಸು ಮತ್ತಷ್ಟು ಬಿರುಸು ಪಡೆದುಕೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಧ್ಯಕ್ಷರಾದವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಸಾಗಬೇಕಿತ್ತು. ಎಲ್ಲರ ಸಹಕಾರದಿಂದ ಪಕ್ಷ ಸಂಘಟನೆ ಮಾಡಬೇಕಿತ್ತು. ಆದರೆ ಇಲ್ಲಿ ಅಧ್ಯಕ್ಷರಿಗೆ ನಿಯಂತ್ರಣ ತಪ್ಪಿದಂತೆ ಕಾಣುತ್ತಿದೆ. ಯಾವ ನಾಯಕರೂ ಅವರ ಮಾತು ಕೇಳುತ್ತಿಲ್ಲ. ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವನ್ನೂ ಅಧ್ಯಕ್ಷರು ಮಾಡಿದಂತೆ ಕಾಣುತ್ತಿಲ್ಲ. ಈ ವಿಚಾರವನ್ನು ಹೈಕಮಾಂಡ್ ಅಂಗಳದಲ್ಲಿಟ್ಟು ಪರಿಹಾರ ಸೂತ್ರ ರೂಪಿಸುವ ಕೆಲಸವೂ ಆಗುತ್ತಿಲ್ಲ. ಪತ್ರ ಸೋರಿಕೆಯಾದ ನಂತರ ಯಾರು ಏನಾದರೂ ಮಾಡಿಕೊಳ್ಳಲಿ ಎಂಬ ಮನೋಭಾವ ಅಸಹಾಯಕತೆ ತಾಳಿರುವುದು ಒಳಬೇಗುದಿ ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.