ADVERTISEMENT

ಮಂದಕೃಷ್ಣರಿಂದ ಬಿಜೆಪಿಯ ಓಲೈಕೆ: ಗಂಗಹನುಮಯ್ಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 5:48 IST
Last Updated 24 ಏಪ್ರಿಲ್ 2024, 5:48 IST
ಗಂಗಹನುಮಯ್ಯ
ಗಂಗಹನುಮಯ್ಯ   

ತುಮಕೂರು: ‘ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರು ಸಂವಿಧಾನ ಬದಲಾಯಿಸಲು ಹೊರಟಿರುವ ಬಿಜೆಪಿಯನ್ನು ಓಲೈಸುತ್ತಿದ್ದಾರೆ. ಮಾದಿಗರನ್ನು ಬಿಜೆಪಿಯತ್ತ ಸೆಳೆಯುತ್ತಿದ್ದಾರೆ’ ಎಂದು ಮಾಜಿ ಶಾಸಕ ಗಂಗಹನುಮಯ್ಯ ಆರೋಪಿಸಿದ್ದಾರೆ.

ಸಂವಿಧಾನ ಬದಲಾಯಿಸಲು ಮುಂದಾದವರು ಮೀಸಲಾತಿ ವರ್ಗೀಕರಣದ ಪರವಾಗಿ ಇರುತ್ತಾರಾ? ಸಂವಿಧಾನ ಉಳಿದರೆ ತಾನೇ ವರ್ಗೀಕರಣ ಸಾಧ್ಯವಾಗಲಿದೆ? ಸಮುದಾಯದ ಮಕ್ಕಳು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಮಾದಿಗರ ಸೌಲಭ್ಯಗಳಿಗೆ ಕತ್ತರಿ ಹಾಕುತ್ತಿದೆ. ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ್ದು, ಮೀಸಲಾತಿಯ ಪ್ರಶ್ನೆ ಇಲ್ಲದಂತೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂದಕೃಷ್ಣ ಅವರು ಯಾವ ಭರವಸೆಯೊಂದಿಗೆ ಬಿಜೆಪಿ ಪರ ಮತ ಕೇಳುತ್ತಿದ್ದಾರೆ ಎಂಬುವುದು ತಿಳಿಯದಾಗಿದೆ. ಸಮ ಸಮಾಜದ ಕಡೆಗೆ ಮುನ್ನಡೆಯುತ್ತಿರುವ ಶೋಷಿತ ಸಮುದಾಯಗಳನ್ನು ಹಿಂದಕ್ಕೆ ತಳ್ಳಿ, ಶ್ರೇಣೀಕೃತ ವ್ಯವಸ್ಥೆಗೆ ದೂಡಲು ತವಕಿಸುತ್ತಿದ್ದಾರೆ. ಮಾದಿಗರ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯದ ಎಲ್ಲರು ಒಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್‌ ಬೆಂಬಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಬಲಪಡಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.