ADVERTISEMENT

ತುಮಕೂರು| ಕೃತಿ ವಿಮರ್ಶೆ ಅಂತಿಮ ತೀರ್ಪಲ್ಲ: ಪ್ರೊ.ಓ.ಎಲ್‌.ನಾಗಭೂಷಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 6:46 IST
Last Updated 9 ಜನವರಿ 2026, 6:46 IST
ತುಮಕೂರು ವಿ.ವಿಯಲ್ಲಿ ಗುರುವಾರ ಗೀತಾ ವಸಂತ ಅವರ ‘ತೆರೆದಷ್ಟೂ ಅರಿವು’ ಕೃತಿಯನ್ನು ವಿಮರ್ಶಕ ಪ್ರೊ.ಓ.ಎಲ್‌.ನಾಗಭೂಷಣಸ್ವಾಮಿ ಲೋಕಾರ್ಪಣೆ ಮಾಡಿದರು. ಗೀತಾ ವಸಂತ, ಪ್ರೊ.ಎಚ್.ಎಸ್.ಮೋಹನ್, ರಂಗನಾಥ ಕಂಟನಕುಂಟೆ ಉಪಸ್ಥಿತರಿದ್ದರು
ತುಮಕೂರು ವಿ.ವಿಯಲ್ಲಿ ಗುರುವಾರ ಗೀತಾ ವಸಂತ ಅವರ ‘ತೆರೆದಷ್ಟೂ ಅರಿವು’ ಕೃತಿಯನ್ನು ವಿಮರ್ಶಕ ಪ್ರೊ.ಓ.ಎಲ್‌.ನಾಗಭೂಷಣಸ್ವಾಮಿ ಲೋಕಾರ್ಪಣೆ ಮಾಡಿದರು. ಗೀತಾ ವಸಂತ, ಪ್ರೊ.ಎಚ್.ಎಸ್.ಮೋಹನ್, ರಂಗನಾಥ ಕಂಟನಕುಂಟೆ ಉಪಸ್ಥಿತರಿದ್ದರು   

ತುಮಕೂರು: ‘ಕೃತಿ ವಿಮರ್ಶೆ ಮಾಡುವುದು ಅಂತಿಮ ತೀರ್ಪಲ್ಲ. ಅದು ವಿಮರ್ಶಕನ ನಿಲುವಷ್ಟೇ’ ಎಂದು ವಿಮರ್ಶಕ ಪ್ರೊ.ಓ.ಎಲ್‌.ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಅಮೂಲ್ಯ ಪುಸ್ತಕದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೀತಾ ವಸಂತ ಅವರ ‘ತೆರೆದಷ್ಟೂ ಅರಿವು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ವಿಮರ್ಶಕ ಒಂದು ನಿಲುವು ತಾಳಬೇಕು. ಆ ನಿಲುವಿನ ಬಗೆಗೂ ವಿಮರ್ಶೆ ನಡೆಯಬೇಕು. ಒಂದು ಸಾಹಿತ್ಯ ಕೃತಿಯನ್ನು ಅರ್ಥಮಾಡಿಕೊಳ್ಳುವುದು ಎಂಬುವುದು ಇಲ್ಲ. ಅರ್ಥ ಎಂಬುದು ಅನುಭವದ ಸಾವು. ಒಂದು ಸತ್ಯ ಎನ್ನುವುದು ಇದೆಯೇ? ಸತ್ಯ, ಅನುಭವ ಎಂದರೇನು? ಪ್ರಶ್ನೆಗಳನ್ನು ಲೇಖಕರು ತಮ್ಮ ಕೃತಿಯಲ್ಲಿ ಹಾಕಿಕೊಂಡಿದ್ದಾರೆ ಎಂದು ಹೇಳಿದರು.

ADVERTISEMENT

ಗೀತಾ ವಸಂತ ಅವರು ಪ್ರಾಮಾಣಿಕವಾದ ವಿಮರ್ಶೆಯನ್ನು ತಮ್ಮ ಕೃತಿಯಲ್ಲಿ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿ ಕುರಿತು ಮಾತನಾಡಿದ ರಂಗನಾಥ ಕಂಟನಕುಂಟೆ, ‘ವಿಮರ್ಶೆ ಎಂಬುದೇ ಒಂದು ಬಂಡುಕೋರತನ, ಚಕಮಕಿತನ. ವಿಮರ್ಶೆಯ ಪ್ರಜಾಸತ್ತಾತ್ಮಕ ನಿಲುವು ಕಳೆದುಹೋಗುತ್ತಿರುವ ಕಾಲಘಟ್ಟದಲ್ಲಿ ವಿಮರ್ಶಕರ ನಿಲುವು ಏನೆಂಬುದು ಮುಖ್ಯ’ ಎಂದು ಹೇಳಿದರು.

‘ಲೇಖಕರು ಸಾಹಿತ್ಯ ಕೃತಿಯ ಅನನ್ಯತೆಯನ್ನು ಮಾನ್ಯ ಮಾಡುವ, ಸಾಹಿತ್ಯ ಕೃತಿಯ ಅನುಭವವನ್ನೇ ಪ್ರಧಾನವಾಗಿ ನೋಡುವ ಪ್ರಯತ್ನ ಮಾಡಿದ್ದಾರೆ. ಕೋಮಲವಾದ ಸೃಜನಶೀಲ ಕೃತಿಗಳನ್ನು ಅಷ್ಟೇ ಕೋಮಲವಾಗಿ ಎದುರುಗೊಂಡಿದ್ದಾರೆ’ ಎಂದರು.

ಲೇಖಕಿ ಗೀತಾ ವಸಂತ, ‘ಕೋಮಲವಾಗಿರುವುದು ದುರ್ಬಲವಲ್ಲ ಎನ್ನುವುದು ನನ್ನ ಅನುಭವದಲ್ಲಿ ಮೂಡಿದ ಲೋಕದೃಷ್ಟಿ. ಎಲ್ಲವನ್ನೂ ಸಾವಧಾನದಿಂದ, ಸೂಕ್ಷ್ಮತೆಯಿಂದ, ಅಂತಃಕರಣದಿಂದ ಒಳಗೊಳ್ಳುವ ಒಳನೋಟಗಳನ್ನು ಕಾಣಿಸುವ ಪ್ರಯತ್ನ ಈ ಕೃತಿಯಲ್ಲಿದೆ’ ಎಂದು ತಿಳಿಸಿದರು.

ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎಚ್.ಎಸ್.ಮೋಹನ್, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಪ್ರೊ.ನಿತ್ಯಾನಂದ ಬಿ. ಶೆಟ್ಟಿ, ಪ್ರಾಧ್ಯಾಪಕರಾದ ಎನ್.ಎಸ್.ಗುಂಡೂರ, ನಾಗಭೂಷಣ ಬಗ್ಗನಡು, ಲೇಖಕರಾದ ಎಸ್.ಪಿ.ಪದ್ಮಪ್ರಸಾದ್, ರಂಗಮ್ಮ ಹೊದೆಕಲ್, ಮಿರ್ಜ ಬಷೀರ್, ಗುರುಪ್ರಸಾದ್ ಕಂಟಲಗೆರೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.