ADVERTISEMENT

ತುಮಕೂರು: ಕ್ಯಾರೆಟ್, ಕ್ಯಾಪ್ಸಿಕಂ ಕೆ.ಜಿ ₹ 100!

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 6:15 IST
Last Updated 15 ನವೆಂಬರ್ 2021, 6:15 IST
ತರಕಾರಿ
ತರಕಾರಿ   

ತುಮಕೂರು: ತರಕಾರಿ ಬೆಲೆ ಏರಿಕೆ ಮುಂದುವರಿದಿದ್ದು, ಕ್ಯಾಪ್ಸಿಕಂ ಕೆ.ಜಿ ಶತಕ ದಾಟಿದ್ದರೆ, ಈಗ ಕ್ಯಾರೆಟ್ ಇತರೆ ತರಕಾರಿಗಳು ಅದೇ ದಾರಿ ಹಿಡಿದಿವೆ.

ಹಿಂದಿನ ವಾರ ಕ್ಯಾಪ್ಸಿಕಂ ಕೆ.ಜಿ ₹ 100ಕ್ಕೆ ಏರಿಕೆಯಾಗಿದ್ದು, ಈಗಲೂ ಅದೇ ಬೆಲೆ ಇದೆ. ಕ್ಯಾರೆಟ್ ಒಮ್ಮೆಲೆ ಕೆ.ಜಿ.ಗೆ ₹ 50 ಜಿಗಿದಿದ್ದು, ₹ 100ಕ್ಕೆ ತಲುಪಿದೆ. ಇತರ ತರಕಾರಿಗಳೂ ದುಬಾರಿಯಾಗಿದ್ದು, ಈವರೆಗೆ ಇಳಿಕೆಯತ್ತ ಸಾಗಿದ್ದ ಬೀನ್ಸ್ ಧಾರಣೆ ಮತ್ತೆ ಆಕಾಶದತ್ತ ಮುಖ ಮಾಡಿದೆ.

ಗೆಡ್ಡೆಕೋಸು, ಬೆಂಡೆಕಾಯಿ, ಬದನೆಕಾಯಿ, ಟೊಮೆಟೊ, ಬೀಟ್ರೂಟ್, ಬೆಂಡೆಕಾಯಿ, ಮೂಲಂಗಿ, ಹಸಿಮೆಣಸಿನಕಾಯಿ ಬೆಲೆ ಹೆಚ್ಚಳವಾಗಿದೆ. ಒಂದು ಹೂ ಕೋಸಿನ ಬೆಲೆ ₹60ಕ್ಕೆ ಏರಿಕೆಯಾಗಿದೆ.

ADVERTISEMENT

ಕಳೆದ ಎರಡು ವಾರಗಳಿಂದ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದ ಸೊಪ್ಪಿನ ಧಾರಣೆ ಮತ್ತೆ ಏರಿಕೆಯತ್ತ ಹೆಜ್ಜೆ ಹಾಕಿದೆ. ಕೊತ್ತಂಬರಿ ಸೊಪ್ಪು ಕೆ.ಜಿ.ಗೆ ₹ 30 ಏರಿಕೆಯಾಗಿ, ₹ 60–80ಕ್ಕೆ ತಲುಪಿದೆ. ಸಬ್ಬಕ್ಕಿ ಸೊಪ್ಪು ಕೆ.ಜಿ ₹ 50–60ಕ್ಕೆ ಜಿಗಿದಿದ್ದು, ಪಾಲಕ್ ಸೊಪ್ಪು ಕೆ.ಜಿ ₹70–80ಕ್ಕೆ ಮಾರಾಟವಾಗುತ್ತಿದೆ. ಮೆಂತ್ಯ ಸೊಪ್ಪಿನ ಬೆಲೆ ಅಲ್ಪ ಕಡಿಮೆಯಾಗಿದ್ದು, ಕೆ.ಜಿ ₹80–100ಕ್ಕೆ
ಇಳಿಕೆಯಾಗಿದೆ.

ತರಕಾರಿ, ಸೊಪ್ಪುಗಳು ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸಗಟು ಬೆಲೆಯಲ್ಲಿ ದೊರಕುತ್ತಿದ್ದರೆ, ಚಿಲ್ಲರೆ ಮಾರಾಟದಲ್ಲಿ ಮತ್ತಷ್ಟು ದುಬಾರಿಯಾಗಿವೆ. ಸಾಕಷ್ಟು ತರಕಾರಿಗಳನ್ನು ಕೆ.ಜಿ.ಗೆ ₹100ರಂತೆ ಮಾರಾಟ ಮಾಡಲಾಗುತ್ತಿದೆ. ಧಾರಣೆ ತೀವ್ರವಾಗಿ ಹೆಚ್ಚಳವಾಗಿರುವುದು ಸಾರ್ವಜನಿಕರನ್ನು ಹೈರಾಣಾಗಿಸಿದ್ದು, ಸಾಕಷ್ಟು ಜನರು ತರಕಾರಿ, ಸೊಪ್ಪು ಖರೀದಿಸುವುದನ್ನೇ ಕಡಿಮೆ ಮಾಡಿದ್ದಾರೆ.

ಹಿಂದೆ ಮಳೆ ಬಿದ್ದ ಸಮಯದಲ್ಲಿ ತರಕಾರಿ ಗಿಡದಲ್ಲೇ ಕೊಳೆತು ಹಾಳಾಗಿದ್ದು, ನಂತರ ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವಾಗಲೇ ಚಂಡಮಾರುತದಿಂದ ಸತತವಾಗಿ ಮಳೆ ಬಿತ್ತು. ಇದರಿಂದಾಗಿ ತರಕಾರಿ, ಸೊಪ್ಪು ಬೆಳೆ ಹಾಳಾಗಿದ್ದು, ಆವಕ ತೀವ್ರವಾಗಿ ಕುಸಿದಿದೆ. ಇದರಿಂದಾಗಿ ಬೆಲೆ ಏರಿಕೆಯಾಗುತ್ತದೇ ಇದ್ದು, ಮುಂದಿನ ಕೆಲವು ವಾರಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಬಹುದು ಎಂದು ಅಂತರಸನಹಳ್ಳಿ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಧಾನ್ಯಗಳ ಧಾರಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿಲ್ಲ. ಆದರೆ, ಒಣ ಹಣ್ಣುಗಳ ಬೆಲೆ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಬಾದಾಮಿ ಕೆ.ಜಿ ₹ 700ಕ್ಕೆ ಇಳಿಕೆಯಾಗಿದೆ. ದ್ರಾಕ್ಷಿ ಕೆ.ಜಿ ₹200–240, ಗೋಡಂಬಿ ಕೆ.ಜಿ ₹ 700–750ಕ್ಕೆ ಕಡಿಮೆಯಾಗಿದೆ. ಉದ್ದಿನ ಬೇಳೆ, ಹೆಸರು ಕಾಳು, ಬಟಾಣಿ ಧಾರಣೆ ಅಲ್ಪ ಕುಸಿದಿದ್ದು, ಸಕ್ಕರೆ ಕೆ.ಜಿ.ಗೆ ₹1 ಕಡಿಮೆಯಾಗಿದೆ.

ಅಡುಗೆ ಎಣ್ಣೆ ಬೆಲೆ ಇಳಿಕೆಯತ್ತ ಸಾಗಿದ್ದು, ಸನ್‌ ಫ್ಲವರ್ ಕೆ.ಜಿ ₹ 140, ಪಾಮಾಯಿಲ್ ಕೆ.ಜಿ ₹ 120–125ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ದಾಳಿಂಬೆ, ಪಪ್ಪಾಯಿ, ಪೈನಾಪಲ್ ಬೆಲೆ ಕೊಂಚ ಹೆಚ್ಚಳವಾಗಿದೆ. ಇತರ ಹಣ್ಣುಗಳ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ಕೋಳಿ ಬೆಲೆ: ಬ್ರಾಯ್ಲರ್ ಕೋಳಿ ಕೆ.ಜಿ ₹160ಕ್ಕೆ, ರೆಡಿ ಚಿಕನ್ ₹ 230ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹135ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮೀನು ಬೆಲೆ: ಮೀನಿನ ಬೆಲೆ ಅಲ್ಪಮಟ್ಟಿಗೆ ಕಡಿಮೆಯಾಗಿದ್ದು, ಬಂಗುಡೆ ಕೆ.ಜಿ 220, ಬೂತಾಯಿ ಕೆ.ಜಿ ₹250, ಅಂಜಲ್ ₹710, ಬಿಳಿ ಮಾಂಜಿ ₹ 610, ಕಪ್ಪು ಮಾಂಜಿ ₹ 430, ಬೊಳಿಂಜರ್ ಕೆ.ಜಿ ₹200, ಸೀಗಡಿ (ಟೈಗರ್) ಕೆ.ಜಿ 660ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.