ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ರಾಂಪುರದ ಮಾರಮ್ಮ ಜಾತ್ರೆ ಮತ್ತು ಮಹಾಲಯ ಅಮವಾಸ್ಯೆ ನಿಮಿತ್ತ ಕುರಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ವಾರದ ಆಸುಪಾಸಿನಲ್ಲಿ ಎರಡು ಹಬ್ಬ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಕುರಿಗಳಿಗೆ ಭಾರಿ ಬೇಡಿಕೆ ಇತ್ತು.
ಪಿತೃಪಕ್ಷದ ಕೊನೆ ದಿನ ಪೂರ್ವಜರಿಗೆ ದರ್ಪಣ ನೀಡುವುದು ಮತ್ತು ವಿಶೇಷ ಪೂಜೆ ನಂತರ ಮಾಂಸಹಾರ ಸೇವಿಸುವುದು ಹಲವು ಕುಟುಂಬಗಳಲ್ಲಿ ರೂಢಿಯಲ್ಲಿದೆ. ಈ ಕಾರಣಗಳಿಂದಾಗಿ ಪಟ್ಟಣದ ಕುರಿಸಂತೆ ಜನಸಾಗರ ಕಂಡುಬಂತು.
ಮುಂಜಾನೆ ಸಂತೆ ಆರಂಭವಾಗುತ್ತಿದ್ದಂತೆಯೇ ವ್ಯಾಪಾರ ವಹಿವಾಟು ಗರಿಗೆದರಿತು. ಕುರಿಗಳ ಬೆಲೆ ಕೂಡ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿತ್ತು. ಒಂದು ಕುರಿಗೆ ₹10 ಸಾವಿರದಿಂದ ₹25 ಸಾವಿರವರೆಗೆ ಇತ್ತು. ಗ್ರಾಹಕರು ಉತ್ತಮ ತಳಿಯ ಕುರಿಗಳನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಬೆಲೆ ನಿಗದಿ ಪಡಿಸಲು ವ್ಯಾಪಾರಿಗಳೊಂದಿಗೆ ಚೌಕಾಸಿ ನಡೆಸಿದರು.
ಕಂದಿಕೆರೆ ಹೋಬಳಿಯ ಪೂರ್ಣ ಪ್ರಮಾಣದ ಹಳ್ಳಿಗಳಲ್ಲಿ ಮಾರಮ್ಮ ಜಾತ್ರೆ ವೈಭವದಿಂದ ನಡೆಯುತ್ತದೆ. ದೂರದ ಊರಿಗೆ ಉದ್ಯೋಗ ಅರಸಿ ಹೋದ ಜನರು ಈ ಜಾತ್ರೆಯ ಸಲುವಾಗಿ ಊರಿಗೆ ಹಿಂತಿರುಗಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಕೃಷಿಯ ಜೊತೆಗೆ ಪಶು ಪಾಲನೆಯಲ್ಲಿ ತೊಡಗಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ ರಾಂಪುರದಮ್ಮ ಮತ್ತು ಮಹಾಲಯ ಅಮವಾಸ್ಯೆ ಹಿಂದೆ ಮುಂದೆ ಬಂದಿದೆ. ಹಬ್ಬಗಳ ಸಲವಾಗಿ ಕುರಿ ಮಾರಾಟ ಮಾಡಲು ಉತ್ತಮ ಎಂದು ಕುರಿ ಸಾಕಿದ್ದೆವು. ಒಳ್ಳೆಯ ಮೊತ್ತಕ್ಕೆ ಕುರಿ ಮಾರಾಟವಾದವು ಎಂದು ಕೋಡಿಹಳ್ಳಿ ಅನ್ನಪೂರ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.