ADVERTISEMENT

ಶಾಲಾ ಅಂಗಳದಲ್ಲಿ ಮಕ್ಕಳ ಕಲರವ

ಆರತಿ ಎತ್ತಿ ವಿದ್ಯಾರ್ಥಿಗಳಿಗೆ ಸ್ವಾಗತ l ಕೋವಿಡ್‌ ನಿಯಮ ಪಾಲನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 3:12 IST
Last Updated 24 ಆಗಸ್ಟ್ 2021, 3:12 IST
ತುಮಕೂರಿನ ಎಂಪ್ರೆಸ್ ಶಾಲೆಯಲ್ಲಿ ಮಕ್ಕಳ ಕುಶಲೋಪರಿ
ತುಮಕೂರಿನ ಎಂಪ್ರೆಸ್ ಶಾಲೆಯಲ್ಲಿ ಮಕ್ಕಳ ಕುಶಲೋಪರಿ   

ತುಮಕೂರು: ‘ನಿನ್ನ ಮುಖ ನೋಡಿ ಎಷ್ಟು ತಿಂಗಳಾಯಿತು. ಮನೆಯಲ್ಲಿ ಇದ್ದು ಬೇಜಾರಾಗಿತ್ತು; ಆನ್‌ಲೈನ್ ಕ್ಲಾಸ್ ಕೇಳಿದರೂ, ಎಷ್ಟೇ ಓದಿದರೂ ತಲೆಗೆ ಹೋಗುತ್ತಿರಲಿಲ್ಲ; ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾಕಾಗಿತ್ತು; ರಜೆ ಸಮಯದಲ್ಲಿ ಏನೆಲ್ಲ ಮಾಡಿದೆ, ಎಷ್ಟು ಓದಿದೆ; ಈಗಲಾದರೂ ಸ್ಕೂಲಿಗೆ ಬರುವಂತಾಯಿತಲ್ಲ...’

ನಗರದ ಎಂಪ್ರೆಸ್ ಶಾಲೆಯಲ್ಲಿ ವಿದ್ಯಾರ್ಥಿ ರಮೇಶ ಹೀಗೆ ಹೇಳುತ್ತಿದ್ದರೆ, ಅದಕ್ಕೆ ಮತ್ತೊಬ್ಬ ಧ್ವನಿಗೂಡಿಸಿದ. ದ್ವಿತೀಯ ಪಿಯು ವಿದ್ಯಾರ್ಥಿನಿ ಐಶ್ವರ್ಯ ಇತರರು ಜತೆಯಾದರು. ತರಗತಿಗಳು ನಡೆಯದೆ ಪಟ್ಟಪಾಡು, ಅರ್ಥವಾಗದ ಆನ್‌ಲೈನ್ ತರಗತಿ, ಸಮಸ್ಯೆಗಳಿಗೆ ಸಿಗದ ಉತ್ತರ, ಅನುಭವಿಸಿದ ಸಂಕಟವನ್ನು ಒಬ್ಬೊಬ್ಬರೇ ತಮ್ಮದೇ ಮಾತುಗಳಲ್ಲಿ ಹೇಳಿಕೊಂಡು ಹಗುರವಾದರು. ಕೊನೆಗೂ ಶಾಲೆಗೆ ಬಂದಿದ್ದೇವೆ, ಇದೇ ರೀತಿ ಇರಲಪ್ಪ ಎಂದು ನಿಟ್ಟುಸಿರು ಬಿಟ್ಟರು.

ಕೋವಿಡ್ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡ ನಂತರ ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿತ್ತು. ಪರೀಕ್ಷೆಗಳೂ ಇಲ್ಲದೆ ತೇರ್ಗಡೆಯಾಗಿದ್ದರು. ಈಗ ಕೊರೊನಾ ಸೋಂಕು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, ಸೋಮವಾರದಿಂದ ಶಾಲೆಗಳು ಪುನರಾರಂಭವಾಗಿದ್ದು, 9, 10 ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳು ಖುಷಿಯಿಂದಲೇ ಬಂದಿದ್ದರು.

ADVERTISEMENT

ನಗರ ಹಾಗೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶಿಕ್ಷಕರು ಮಾವಿನ ತೋರಣ ಕಟ್ಟಿ ಶಾಲೆಗಳನ್ನು ಸಿಂಗರಿಸಿ, ಮಕ್ಕಳನ್ನು ಬರಮಾಡಿಕೊಂಡರು. ನಗರದ ಎಂಪ್ರೆಸ್ ಶಾಲೆಯಲ್ಲಿ ಗುಲಾಬಿ ಹೂ ಕೊಟ್ಟು ಸ್ವಾಗತಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಆರತಿ ಎತ್ತಿ ಒಳಗೆ ಬಿಟ್ಟುಕೊಂಡರು. ಮಕ್ಕಳಲ್ಲೂ ನಗುಮುಖ ಕಂಡುಬಂತು.

ಮೊದಲ ದಿನ ಲವಲವಿಕೆಯಿಂದ ಶಾಲೆ, ಕಾಲೇಜುಗಳಲ್ಲಿ ಸುತ್ತಾಡಿದರು. ಸ್ನೇಹಿತರ ಜತೆ ತಮ್ಮ ಅನುಭವ, ಕಷ್ಟ, ಸುಖ ಹಂಚಿಕೊಂಡರು. ಶಿಕ್ಷಕರನ್ನು ಭೇಟಿ ಮಾಡಿದರು. ಮೊದಲ ದಿನವಾದ್ದರಿಂದ ಶಿಕ್ಷಕರೂ ಮಕ್ಕಳನ್ನು ಬಿಗಿ ಹಿಡಿತಕ್ಕೆ ತೆಗೆದುಕೊಳ್ಳಲಿಲ್ಲ. ಶಾಲೆಯಲ್ಲಿ ಉತ್ತಮ ವಾತಾವರಣ ಮೂಡಲಿ ಎಂಬ ಕಾರಣಕ್ಕೆ ಪಾಠದ ಬದಲು ಕುಶಲೋಪರಿಯಲ್ಲಿ ತೊಡಗಿದ್ದರು. ರಜೆ ಸಮಯದಲ್ಲಿ ಏನೆಲ್ಲಅಭ್ಯಾಸ ಮಾಡಿದ್ದಾರೆ ಎಂಬುದನ್ನು ತಿಳಿದುಕೊಂಡು ಮುಂದಿನ ಪಾಠಕ್ಕೆ ಸಿದ್ಧರಾದರು. ವಿದ್ಯಾರ್ಥಿಗಳು ಸಹ ತಮ್ಮ ಅನುಭವ ಹಂಚಿಕೊಂಡರು.

ಕೋವಿಡ್ ನಿಯಮ ಪಾಲನೆ: ಶಾಲೆ, ಕಾಲೇಜಿಗೆ ಬರುವ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಥರ್ಮಲ್ ಸ್ಕ್ಯಾನಿಂಗ್ ಮಾಡಿ ಒಳಗೆ ಬಿಡಲಾಯಿತು. ಕುಡಿಯುವ ನೀರು, ಊಟವನ್ನು ಮನೆಯಿಂದಲೇ ತಂದಿದ್ದರು.

ಪೋಷಕರ ಜತೆಗೆ ಬಂದಿದ್ದ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆದುಕೊಂಡರು. ಕೆಲವರು ಈಗಾಗಲೇ ಪ್ರವೇಶ ಪಡೆದುಕೊಂಡಿದ್ದು, ಈ ತಿಂಗಳ ಅಂತ್ಯದ ವರೆಗೆ ಪ್ರವೇಶ ಪಡೆಯಲು ಕಾಲಾವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.