ADVERTISEMENT

ಕೊರೋನಾ ಭೀತಿ; ಸ್ವಚ್ಛತೆ ಕಾಣದ ಚರಂಡಿಗಳು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 13:20 IST
Last Updated 20 ಮಾರ್ಚ್ 2020, 13:20 IST
ಪಟ್ಟಣದ ಮಲ್ಲೇಶಪುರ ರಸ್ತೆಯ ಸುವರ್ಣಮುಖಿ ನದಿ ಒಡಲು ಸೇರಿರುವ ತ್ಯಾಜ್ಯದ ಸದ್ಯದ ಸ್ಥಿತಿ
ಪಟ್ಟಣದ ಮಲ್ಲೇಶಪುರ ರಸ್ತೆಯ ಸುವರ್ಣಮುಖಿ ನದಿ ಒಡಲು ಸೇರಿರುವ ತ್ಯಾಜ್ಯದ ಸದ್ಯದ ಸ್ಥಿತಿ   

ಕೊರಟಗೆರೆ: ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವ ಕಾರಣ ಎಲ್ಲಡೆ ಸ್ವಚ್ಛತೆ ಹಾಗೂ ಮುಂಜಾಗೃತ ಕ್ರಮ ವಹಿಸಲು ಹರಸಾಹಸ ಪಡುತ್ತಿದ್ದರೂ, ಪಟ್ಟಣದಲ್ಲಿ ಮಾತ್ರ ಇದಾವುದರ ಪರಿವೇ ಇಲ್ಲದೆ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಪಟ್ಟಣದ ಬಹುತೇಕ ಚರಂಡಿಗಳು ಇಲ್ಲಿವರೆಗೂ ಸರಿಯಾಗಿ ಸ್ವಚ್ಛಗೊಳಿಸಿಲ್ಲ. ಬಹುತೇಕ ತೆರೆದ ಚರಂಡಿಗಳು ನೀರು ಹಾಗೂ ಕಸದಿಂದ ಕಟ್ಟಿಕೊಂಡು ದುರ್ನಾತ ಬೀರುತ್ತಿವೆ.

ಪಟ್ಟಣದಿಂದ ಮಲ್ಲೇಶಪುರಕ್ಕೆ ಹೋಗುವ ರಸ್ತೆಯ ಸುವರ್ಣಮುಖಿ ನದಿ ಬಳಿ ಕೋಳಿ ಹಾಗೂ ಮಾಂಸದಂಗಡಿ ತ್ಯಾಜ್ಯವನ್ನು ನದಿ ಹರಿಯುವ ಜಾಗದಲ್ಲಿ ಸುರಿಯಲಾಗಿದೆ. ಇದರ ಜೊತೆಯಲ್ಲಿ ಪಟ್ಟಣದ ಕೆಲವು ವಾರ್ಡ್‌ಗಳ ಚರಂಡಿ ನೀರನ್ನು ಇದೇ ಸ್ಥಳದಲ್ಲಿ ಹರಿದುಬಿಡಲಾಗಿದೆ. ಇದರಿಂದಾಗಿ ಈ ಜಾಗದಲ್ಲಿ ತ್ಯಾಜ್ಯ ಕೊಳೆತ ಸ್ಥಿತಿಯಲ್ಲಿ ಬಹಳ ದಿನಗಳಿಂದ ರಾಶಿ ಬಿದ್ದಿದೆ.

ADVERTISEMENT

ಇದೇ ಜಾಗದಲ್ಲಿ ಬಹಳದಿನಗಳಿಂದ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು, ಪ್ಲಾಸ್ಟಿಕ್ ಸೇರಿದಂತೆ ಇತರೆ ಕಸಕಡ್ಡಿ ಚರಂಡಿ ನೀರಿನೊಂದಿಗೆ ಕಟ್ಟಿಕೊಂಡು ಕೆಟ್ಟ ವಾಸನೆ ಬೀಉತ್ತಿದೆ.

ತಾಲ್ಲೂಕು ಕಚೇರಿಯ ಸದಾ ಜನಜಂಗುಳಿ ಇರುವ ಕಡೆ ಕಸದ ತೊಟ್ಟಿ ಕಸದಿಂದ ತುಂಬಿ ಬಹಳ ದಿನಗಳೆ ಕಳೆದರೂ ಅದನ್ನು ತೆರವು ಮಾಡಿಲ್ಲ.

ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಹಣ್ಣು, ತರಕಾರಿ, ತಿಂಡಿ ತಿನಿಸು ಅಂಗಡಿಗಳನ್ನು ಮುಚ್ಚುವಂತೆ ನಿರ್ಧಾಕ್ಷಣ್ಯ ಕ್ರಮ ವಹಿಸಲಾಗುತ್ತಿದೆ. ಆದರೆ ತಾಲ್ಲೂಕು ಆಡಳಿತ ಪಟ್ಟಣದ ಸ್ವಚ್ಛತೆ ಬಗ್ಗೆ ಮಾತ್ರ ಅಷ್ಟಾಗಿ ಕಾಳಜಿ ತೋರುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.