ಹಿರಿಯೂರು: ತಾಲ್ಲೂಕಿನ ಕೂನಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ವಿ.ಕೊಟ್ಟಿಗೆ ಗ್ರಾಮವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಲು ಪಂಚಾಯಿತಿ ಆಡಳಿತ ಪಣ ತೊಟ್ಟಿದೆ ಎಂದು ಪಿಡಿಒ ಎಂ. ಸುಷ್ಮಾರಾಣಿ ಹೇಳಿದರು.
ಎ.ವಿ. ಕೊಟ್ಟಿಗೆ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ಲಾಸ್ಟಿಕ್ ಅನ್ನು ಮಿತಿಮೀರಿದ ಪ್ರಮಾಣದಲ್ಲಿ ಬಳಸುತ್ತಿರುವ ಕಾರಣ, ತ್ಯಾಜ್ಯವು ಪರಿಸರಕ್ಕೆ ಸೇರುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲು ಜಿಲ್ಲಾ ಪಂಚಾಯಿತಿ ಸೂಚನೆ ನೀಡಿದೆ. ಲಕ್ಕವ್ವನಹಳ್ಳಿ, ಮಾಯಸಂದ್ರ, ಶಿಡ್ಲಯ್ಯನಹಟ್ಟಿ, ಕೂನಿಕೆರೆ, ಹುಚ್ಚವ್ವನಹಳ್ಳಿ, ಕೆರೆಕೋಡಿಹಟ್ಟಿ, ಸೀಗೇಹಟ್ಟಿ, ಕ್ಯಾತೇದೇವರಹಟ್ಟಿ, ಎ.ವಿ.ಕೊಟ್ಟಿಗೆ ಹಾಗೂ ದೊಡ್ಡಘಟ್ಟ ಗ್ರಾಮಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ರಹಿತ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದೇವೆ’ ಎಂದು ಅವರು ವಿವರಿಸಿದರು.
ಎ.ವಿ.ಕೊಟ್ಟಿಗೆ ಗ್ರಾಮವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ, ಯುವಕ ಯುವತಿಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಗ್ರಾಮದ ಪ್ರತಿ ಮನೆಗೂ ಬಟ್ಟೆ ಚೀಲಗಳನ್ನು ವಿತರಿಸುತ್ತಿದ್ದೇವೆ. ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಚೀಲ, ಬಾಟಲ್, ಇತರೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಇಟ್ಟಿಗೆ ತಯಾರಿಸಲು ಗ್ರಾಮದ ಸುರೇಶ್ ಹಾಗೂ ಸ್ನೇಹಿತರು ಚಿಂತನೆ ನಡೆಸಿದ್ದಾರೆ ಎಂದು ಸುಷ್ಮಾರಾಣಿ ಹೇಳಿದರು.
ಇಲ್ಲಿ ಯಶಸ್ಸು ದೊರೆತರೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ವಿಸ್ತರಿಸುವ ಯೋಜನೆ ಹೊಂದಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್.ಪಿ. ಸೀತಾರಾಂ ತಿಳಿಸಿದರು.
ಸ್ಥಳೀಯ ಅಂಗಡಿಗಳಲ್ಲಿ 20 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಳಸದಂತೆ ನೋಟಿಸ್ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪಂಚಾಯಿತಿ ಸದಸ್ಯರಾದ ಎನ್. ವಿ. ರಾಜಣ್ಣ, ಪಾರ್ಥೇಶ್, ಸಿ. ಈರಣ್ಣ, ಗ್ರಾಮದ ಮುಖಂಡರಾದ ಗೋವಿಂದಪ್ಪ, ಉದಯ ಶಂಕರ್, ಮುನ್ನಾ ಹಾಜರಿದ್ದರು. ಪ್ರತಿ ಮನೆಗೆ ಹಸಿಕಸ–ಒಣಕಸ ಸಂಗ್ರಹಕ್ಕೆ ಪ್ರತ್ಯೇಕ ಬುಟ್ಟಿ, ಬಟ್ಟೆಯ ಚೀಲ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.