ADVERTISEMENT

ಪುರಸಭೆ ಆಸ್ತಿ ರಕ್ಷಣೆಗೆ ಬದ್ಧ

ಚಿಕ್ಕನಾಯಕನಹಳ್ಳಿ: ಬಜೆಟ್‌ ಪೂರ್ವಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 6:01 IST
Last Updated 27 ಡಿಸೆಂಬರ್ 2022, 6:01 IST
ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಸೋಮವಾರ ಆಯೋಜಿಸಿದ್ದ ಆಯವ್ಯಯ ಪೂರ್ವ ಸಿದ್ಧತಾ ಸಭೆಯಲ್ಲಿ ಮುಖ್ಯಾಧಿಕಾರಿ ಶ್ರೀನಿವಾಸ್‍ ಮಾತನಾಡಿದರು. ಸ್ಥಾಯಿಸಮಿತಿ ಅಧ್ಯಕ್ಷ ದಯಾನಂದ್ ಇದ್ದರು
ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಸೋಮವಾರ ಆಯೋಜಿಸಿದ್ದ ಆಯವ್ಯಯ ಪೂರ್ವ ಸಿದ್ಧತಾ ಸಭೆಯಲ್ಲಿ ಮುಖ್ಯಾಧಿಕಾರಿ ಶ್ರೀನಿವಾಸ್‍ ಮಾತನಾಡಿದರು. ಸ್ಥಾಯಿಸಮಿತಿ ಅಧ್ಯಕ್ಷ ದಯಾನಂದ್ ಇದ್ದರು   

ಚಿಕ್ಕನಾಯಕನಹಳ್ಳಿ: ದಾಖಲೆಗಳ ಅನುಸಾರ ಪುರಸಭೆಯ ಆಸ್ತಿಗಳ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಶ್ರೀನಿವಾಸ್ ಭರವಸೆ ನೀಡಿದರು.

ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಪುರಸಭೆಯ 2023-24ನೇ ಸಾಲಿನ ಆಯವ್ಯಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಒತ್ತುವರಿ ಬಗ್ಗೆ ದಾಖಲೆ ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದರು.

ADVERTISEMENT

ಪುರಸಭೆಗೆ ಸೇರಿದ ಅಂಗಡಿ ಮಳಿಗೆಗಳನ್ನು ಹರಾಜು ಮಾಡಲಾಗುವುದು. ವಿವಾದದಲ್ಲಿರುವ ಮಳಿಗೆಗಳನ್ನು ನ್ಯಾಯಾಲಯದ ನಿರ್ದೇಶನದಂತೆ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.

ಖಾಸಗಿ ಬಸ್‌ ನಿಲ್ದಾಣ ಸೇರಿದಂತೆ ಒತ್ತುವರಿಯಾಗಿರುವ ಪುರಸಭೆ ಆಸ್ತಿಗಳನ್ನು ರಕ್ಷಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ್ ಒತ್ತಾಯಿಸಿದರು.

‘ಪುರಸಭೆಯ ಶೇ 7.25 ಮೀಸಲು ನಿಧಿಯಲ್ಲಿ ಕಡುಬಡವರ ಮನೆಗಳ ದುರಸ್ತಿಗೆ ಆದ್ಯತೆ ನೀಡಬೇಕು. ನೆಹರೂ ವೃತ್ತದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು’ ಎಂದು ಭುವನೇಶ್ವರಿ ಯುವಕ ಸಂಘದ ಅಧ್ಯಕ್ಷ ಶಾಂತಕುಮಾರ್ ಮನವಿ ಮಾಡಿದರು.

ಪಟ್ಟಣದಲ್ಲಿರುವ ದೊಡ್ಡ ದೇವರಾಜ ಅರಸ್ ಸ್ಮಾರಕ ಜಾಗದ ಅಭಿವೃದ್ಧಿಗೆ ಪುರಸಭೆ ನಿರಾಸಕ್ತಿ ತೋರಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಕಬಳಿಸುವ ಹುನ್ನಾರ ನಡೆದಿದೆ. ಕೂಡಲೇ, ಅದನ್ನು ಅಭಿವೃದ್ಧಿಪಡಿಸಬೇಕು ಎಂದು ಮುಖಂಡ ಅಣೆಕಟ್ಟೆ ಸಿದ್ದರಾಮಣ್ಣ ಸಲಹೆ ನೀಡಿದರು.

ಆದಿತ್ಯಾದಿ ನವಗ್ರಹ ಕೃಪಾಪೋಷಿತ ನಾಟಕ ಮಂಡಳಿ ನೂರು ವರ್ಷಗಳ ಕಾಲ ಶನಿಮಹಾತ್ಮೆ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿಕೊಂಡು ಬಂದಿದೆ. ಶತಮಾನೋತ್ಸವ ಆಚರಣೆಗೆ ಅನುದಾನ ನೀಡಬೇಕು ಎಂದು ಕೋರಲಾಯಿತು.

ನಿರ್ವಾಣೇಶ್ವರ ಬಾಲಿಕಾ ಪ್ರೌಢಾಶಾಲೆಗೆ ಕುಡಿಯುವ ನೀರು, ಶೌಚಗೃಹ ದುರಸ್ತಿಗೆ ಹಣ ಒದಗಿಸುವಂತೆ ಶಿಕ್ಷಕ ಬನಶಂಕರಯ್ಯ ಮನವಿ ಮಾಡಿದರು.

ಪುರಸಭೆಯ ಉಳಿತಾಯ ಖಾತೆ ಹಣವನ್ನು ಎಫ್‍.ಡಿ ಮಾಡುವುದು, ಹೆದ್ದಾರಿಯಲ್ಲಿರುವ ವಿದ್ಯುತ್ ಕಂಬಗಳಿಗೆ ಹಾಗೂ ನೆಹರೂ ವೃತ್ತದಲ್ಲಿರುವ ಸೂಚನಾ ಫಲಕಕ್ಕೆ ಭಿತ್ತಿಪತ್ರ ಅಳವಡಿಸುವವರ ವಿರುದ್ಧ ಕ್ರಮ ಜರುಗಿಸಬೇಕು. ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪತ್ರಕರ್ತರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.