ADVERTISEMENT

ಶಾಸಕರಿಗೆ ಅನುದಾನ ನೀಡದ ಕಾಂಗ್ರೆಸ್‌ ಸರ್ಕಾರ: ಕೃಷ್ಣಪ್ಪ

ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 13:20 IST
Last Updated 26 ಆಗಸ್ಟ್ 2023, 13:20 IST
ತುರುವೇಕೆರೆ ತಾಲ್ಲೂಕು ಬೆನಕನಕೆರೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು
ತುರುವೇಕೆರೆ ತಾಲ್ಲೂಕು ಬೆನಕನಕೆರೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು   

ತುರುವೇಕೆರೆ: ‘ರಾಜ್ಯ ಸರ್ಕಾರ ಈವರೆಗೆ ಯಾವ ಕ್ಷೇತ್ರಗಳಿಗೂ ನಯಾಪೈಸೆ ಅನುದಾನ ನೀಡಿಲ್ಲ’ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ಷೇಪಿಸಿದರು.

ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕಾಡಸೂರು ಮತ್ತು ಬೆನಕೆನಕೆರೆಯಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ನಾಲ್ಕನೇ ಬಾರಿಗೆ ಶಾಸಕನಾಗಿದ್ದೇನೆ. ಬಹುಪಾಲು ಎಲ್ಲ ಸಲವೂ ವಿರೋಧ ಪಕ್ಷದಲ್ಲೇ ಇದ್ದವನು ನಾನು. ಆದರೆ ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ. ಜನರು ಶಾಸಕರಿಂದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಗ್ರಾಮಗಳಿಗೆ ಹೋಗಿ ಮುಖ ತೋರಿಸಲು ಆಗುತ್ತಿಲ್ಲ. ಜನರು ಕೆಟ್ಟದಾಗಿ ನೋಡಲು ಆರಂಭಿಸಿದ್ದಾರೆ’ ಎಂದರು.

ADVERTISEMENT

‘ದೇವಾಲಯ ಕಟ್ಟಲು ₹1 ಲಕ್ಷ ಕೇಳಿದರೂ ಕೊಡಲಾರದ ಸ್ಥಿತಿಯಲ್ಲಿ ರಾಜ್ಯದ ಎಲ್ಲ ಶಾಸಕರು ಇದ್ದಾರೆ. ಕೇವಲ ವಿರೋಧ ಪಕ್ಷದವರಲ್ಲ, ಕಾಂಗ್ರೆಸ್ ಶಾಸಕರಿಗೂ ಇದೇ ಸ್ಥಿತಿ ಇದೆ. ಅಧಿಕಾರದ ದುರಾಸೆಗೆ ಗ್ಯಾರಂಟಿ ಕೊಟ್ಟರು. ಇದ್ದ ಎಲ್ಲ ಹಣವನ್ನು ಗ್ಯಾರಂಟಿಗೆ ನೀಡುತ್ತಿದ್ದಾರೆ. ಹಾಗಾಗಿ ಅಭಿವೃದ್ಧಿ ಶೂನ್ಯವಾಗಿದೆ’ ಎಂದರು.

ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ ತೆಂಗು ಬೆಳೆಗಾರರು ಇದ್ದಾರೆ. ಕೊಬ್ಬರಿ ಮತ್ತು ತೆಂಗಿನ ಬೆಲೆ ಪಾತಾಳಕ್ಕೆ ಕುಸಿದಿದೆ. ಪ್ರತಿ ಕ್ವಿಂಟಲ್ ಕೊಬ್ಬರಿ ಬೆಳೆಯಲು ರೈತರಿಗೆ ಕನಿಷ್ಠ ₹15 ಸಾವಿರ ಬೇಕಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ₹8ರಿಂದ ₹9 ಸಾವಿರ ಇದೆ. ನಾಫೆಡ್‌ ಕೇಂದ್ರದಲ್ಲಿ ಕೊಬ್ಬರಿ ಖರೀದಿಗೆ ಅನೇಕ ಕಾನೂನುಗಳಿವೆ. ಅಲ್ಲಿ ಹಣ ಪಡೆಯಬೇಕಾದರೆ ರೈತರಿಗೆ ಸುಸ್ತಾಗಿ ಹೋಗುತ್ತದೆ ಎಂದರು.

‘ಪ್ರತಿ ಕ್ವಿಂಟಲ್ ಕೊಬ್ಬರಿಗೆ ರಾಜ್ಯ ಸರ್ಕಾರ ಕೇವಲ ₹1,250 ಪ್ರೋತ್ಸಾಹಧನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೊಬ್ಬ ರೈತ ವಿರೋಧಿ’ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ದೂರಿದರು.

ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ಸಂಘದ ಅಧ್ಯಕ್ಷ ಕೆ.ಜಿ.ಮಹೇಶ್, ಬಿ.ಜೆ.ಬಸವರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಮೇಶ್ ಗೌಡ, ಕೆಪಿಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್, ಸುಧಾ ಮಹೇಶ್, ಗಿರೀಶ್, ವಿಜಯೇಂದ್ರ, ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.