ಸಹಕಾರ ಸಚಿವ ಕೆ.ಎನ್. ರಾಜಣ್ಣ
-ಪ್ರಜಾವಾಣಿ ಚಿತ್ರ
ತುಮಕೂರು: ‘ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಜೂನ್ 30ರಂದು ರಾಜ್ಯಕ್ಕೆ ಬರುತ್ತಿದ್ದು, ಅವರು ನನಗೇನು ತಾಕೀತು ಮಾಡುತ್ತಾರೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದರು.
‘ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ರಾಜ್ಯಕ್ಕೆ ಬರುವ ಸುರ್ಜೇವಾಲ ಪಕ್ಷದ ನಾಯಕರ ಜತೆಗೆ ಚರ್ಚಿಸುತ್ತಾರೆ. ಆದರೆ ನನಗೇನು ತಾಕೀತು ಮಾಡಲು ಸಾಧ್ಯ?’ ಎಂದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಡಿ.ಕೆ.ಶಿವಕುಮಾರ್ ಅವರನ್ನು ಪ್ರಧಾನಿ, ಇಲ್ಲವೆ ಮುಖ್ಯಮಂತ್ರಿಯನ್ನೇ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಸತೀಶ್ ಜಾರಕಿಹೊಳಿ ಅಧ್ಯಕ್ಷರಾಗಬಹುದು ಅಂದುಕೊಂಡಿದ್ದೇನೆ. ಎಲ್ಲವನ್ನೂ ಕಾಲವೇ ತೀರ್ಮಾನ ಮಾಡಲಿದೆ’ ಎಂದು ಹೇಳಿದರು.
‘ನಾನು ಹೇಳಿದ ತಕ್ಷಣ ಕಾಂಗ್ರೆಸ್‌ನಲ್ಲಿ ಮಾತ್ರ ಕ್ರಾಂತಿ ನಡೆಯುತ್ತದೆ ಅಂದುಕೊಳ್ಳಬಾರದು. ಬಿಜೆಪಿಯಲ್ಲೂ ಕ್ರಾಂತಿ ಆಗಬಹುದು. ಪ್ರಧಾನಿ ನರೇಂದ್ರ ಮೋದಿ ಅವರೇ ಬದಲಾಗಬಹುದು’ ಎಂದು ಸಮರ್ಥನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.