ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಭಾನುವಾರ ಪ್ರಗತಿಪರ ಸಂಘಟನೆಗಳಿಂದ ಸಂವಿಧಾನ ಸಂರಕ್ಷಣಾ ಪಡೆ ರಚನೆ ಹಾಗೂ ದೇವನಹಳ್ಳಿ ರೈತರ ಹೋರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆ ಮಾಡಲಾಯಿತು.
ಜಿಲ್ಲಾ ಸಂಯೋಜಕರಾದ ಎನ್.ಇಂದಿರಮ್ಮ ಮಾತನಾಡಿ, ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ನಿರಂತರವಾಗಿ 1,298 ದಿನ ನಡೆಸಿದ ಹೋರಾಟಕ್ಕೆ ಎದ್ದೇಳು ಕರ್ನಾಟಕ ಒಗ್ಗೂಡುವಂತೆ ಮಾಡಿದ್ದು ಪ್ರತಿಫಲ ನೀಡಿದೆ. ಕರ್ನಾಟಕದ ಮಟ್ಟದಲ್ಲಿ ಇದೊಂದು ಐತಿಹಾಸಿಕ ಸಾಧನೆ. ಇದರಿಂದ ಸಂಘಟನೆಯಲ್ಲಿ ಬಲವಿದೆ, ಹೋರಾಟದಲ್ಲಿ ಜಯವಿದೆ ಎಂಬುದು ಸಾಬೀತಾಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾದರೆ ನ್ಯಾಯಯುತ ಬೇಡಿಕೆಗಳನ್ನು ಪಡೆದುಕೊಳ್ಳಬಹುದು ಎಂದು ಪ್ರತಿಪಾದಿಸಿದರು.
ಎದ್ದೇಳು ಕರ್ನಾಟಕ ಸಂಘಟನಕಾರ ರಾಮಕೃಷ್ಣಪ್ಪ ಎದ್ದೇಳು ಕರ್ನಾಟಕದ ಧ್ಯೇಯೋದ್ದೇಶ ಹಾಗೂ ಸಂರಕ್ಷಣಾ ಪಡೆಯ ಅಸ್ತಿತ್ವದ ಅಗತ್ಯವನ್ನು ವಿವರಿಸಿದರು.
ಹಿಂದುಳಿದ ವರ್ಗಗಳ ಮತ್ತು ಅಲೆಮಾರಿ ಮಹಾಸಭಾ ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ, ‘ಸಂವಿಧಾನ ಜನರನ್ನು ರಕ್ಷಿಸಬೇಕಿತ್ತು. ಆದರೆ ಈಗ ಜನರೇ ಸಂವಿಧಾನವನ್ನು ರಕ್ಷಿಸುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಕಾರಣ ಕೋಮುವಾದಿಗಳು ಶ್ರೇಣಿಕೃತ ಸಮಾಜವನ್ನು ರಚಿಸಿ, ಜಾತೀಯತೆಯನ್ನು ಉಳಿಸಿ ತಾವು ಮಾತ್ರ ಶತಮಾನಗಳಿಂದ ಅನುಭವಿಸಿದ ಸುಖ ಸಂತೋಷವನ್ನು ಬಿಟ್ಟು ಕೊಡಲು ತಯಾರಿಲ್ಲ. ಕೆಳ ವರ್ಗದ ದಲಿತ ಮತ್ತು ಶೂದ್ರ ಜಾತಿಗಳ ಜನ ವಿದ್ಯಾವಂತರಾಗಿ ಉನ್ನತ ಹುದ್ದೆಗೆ ಹೋಗಬಾರದೆಂಬ ದುರುದ್ದೇಶದಿಂದ ಜನರಿಗೆ ಕೋಮುವಾದಿ ಅಫೀಮನ್ನು ತುಂಬಿ ದ್ವೇಷ ರಾಜಕಾರಣವನ್ನು ಮಾಡುತ್ತಿದ್ದಾರೆ. ಸಂವಿಧಾನ ರಕ್ಷಣಾ ಪಡೆ ರಚಿಸಿ ಕೋಮುವಾದಿಗಳ ವಿರುದ್ಧ ಹೋರಾಡಬೇಕಿದೆ’ ಎಂದು ಹೇಳಿದರು.
ದೇವನಹಳ್ಳಿ ರೈತರ ಹೋರಾಟದ ಯಶಸ್ಸಿನ ಹಿನ್ನೆಲೆ ವಿಜಯೋತ್ಸವವನ್ನು ಹೋರಾಟಗಾರರಿಗೆ ಹಾಗೂ ಸ್ವಪಕ್ಷದಲ್ಲಿ ವಿರೋಧವಿದ್ದರೂ ಭೂ ಸ್ವಾಧೀನವನ್ನು ಕೈಬಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಮಾತಂಗ ಮುನಿ ಚಾರಿಟಬಲ್ ಟ್ರಸ್ಟ್‌ನ ಗುರುಮೂರ್ತಿ, ಚಿದಾನಂದ್ ಮೂರ್ತಿ, ಜಾಗೃತ ಕರ್ನಾಟಕದ ದೇವರಾಜು, ಕರವೇ ಗೌರವಧ್ಯಕ್ಷೆ ಮಾಲಾ, ಸೃಜನ ಮಹಿಳಾ ಸಂಘಟನೆಯ ರಾಜಮ್ಮ, ಯುಪಿ ಉಮಾದೇವಿ, ಕೋದಂಡಪ್ಪ, ಶಿಕ್ಷಣಾಧತ್ತ ಶಿವಶಂಕರ್, ವದ್ದಿಗಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.