ADVERTISEMENT

ಸಹಕಾರ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿ ಕಾಯ್ದೆ: ಕೆ.ಎನ್.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 4:06 IST
Last Updated 19 ಅಕ್ಟೋಬರ್ 2025, 4:06 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ಸಹಕಾರ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಮಾಜಿ ಸಹಕಾರ ಸಚಿವರೂ ಆದ ಶಾಸಕ ಕೆ.ಎನ್.ರಾಜಣ್ಣ ಇಲ್ಲಿ ಶನಿವಾರ ಹೇಳಿದರು.

‘ನಾನು ಸಚಿವನಾಗಿದ್ದಾಗ ತಿದ್ದುಪಡಿ ಮಾಡಿ ರೂಪಿಸಿರುವ ಕಾನೂನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರ ಅದರ ಮಹತ್ವ ಜನರಿಗೆ ಅರಿವಾಗುತ್ತದೆ. ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಹೊಸ ಕಾಯ್ದೆ ಬಗ್ಗೆ ಅಕ್ಕಪಕ್ಕದ ರಾಜ್ಯದವರೂ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಹಕಾರ ಸಂಘ, ಸಂಸ್ಥೆಗಳಲ್ಲಿ ಚುನಾವಣೆಗೆ ಸ್ಪರ್ಧಿಸುವವರು ತಮ್ಮ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಆಸ್ತಿ ವಿವರ ಸಲ್ಲಿಸುವ ರೀತಿಯಲ್ಲಿ ಸಹಕಾರ ಕ್ಷೇತ್ರದ ಚುನಾವಣೆಯಲ್ಲೂ ಆಸ್ತಿ ವಿವರ ನೀಡುವುದು ಕಡ್ಡಾಯವಾಗಿದೆ ಎಂದರು.

ADVERTISEMENT

ಹಾಲು ಉತ್ಪಾದಕರ ಸಹಕಾರ ಸಂಘಗಳು, ವ್ಯವಸಾಯ ಸೇವಾ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೂ ಮೀಸಲಾತಿ ತರಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಇರುವಂತೆ ಇಲ್ಲೂ ಮೀಸಲಾತಿ ಕಲ್ಪಿಸಲಾಗಿದೆ. ಸಹಕಾರ ಸಂಘ, ಸಂಸ್ಥೆಗಳ ಲೆಕ್ಕಪರಿಶೋಧನೆಗೂ ಬದಲಾವಣೆ ತರಲಾಗಿದೆ ಎಂದು ವಿವರಿಸಿದರು.

ಸರ್ಕಾರದ ನೆರವು ಪಡೆಯುವ ಖಾಸಗಿ ಸಂಸ್ಥೆಗಳು, ಡೇರಿ, ವ್ಯವಸಾಯ ಸೇವಾ ಸಂಘಗಳು ಸೇರಿದಂತೆ ಎಲ್ಲ ಸಹಕಾರ ಸಂಸ್ಥೆಗಳಿಗೂ ಮೂವರು ನಾಮನಿರ್ದೇಶನ ಮಾಡುವ ಕಾನೂನು ಜಾರಿಯಾಗಿದೆ. ಅದರಲ್ಲಿ ತಲಾ ಒಬ್ಬರು ಎಸ್‌ಸಿ, ಎಸ್‌ಟಿ ಹಾಗೂ ಇತರರು ಇರುತ್ತಾರೆ. ಆಯ್ಕೆ ಆಗಿರುವ ಸದಸ್ಯರ ಜಾತಿಯನ್ನು ಹೊರತುಪಡಿಸಿ, ಇತರೆ ಜಾತಿಯವರನ್ನು ನಾಮನಿರ್ದೇಶನ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.

ಡಿಸಿಸಿ ಬ್ಯಾಂಕ್: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಸರಿಯಾದ ದಾರಿಯಲ್ಲಿ ಸಾಗಿದ್ದು, ಕಳೆದ ಆರ್ಥಿಕ ಸಾಲಿನಲ್ಲಿ ರೈತರಿಗೆ ₹800 ಕೋಟಿ, ಕೃಷಿಯೇತರ ₹1,130 ಕೋಟಿ ಸಾಲ ನೀಡಲಾಗಿದೆ. ಪ್ರಸ್ತುತ ಮರಳಿ ಬಾರದ ಸಾಲದ ಪ್ರಮಾಣವನ್ನು (ಎನ್‌ಪಿಎ) ಶೇ 3.18ರಿಂದ ಶೇ 2.90ಕ್ಕೆ ಇಳಿಸಲಾಗಿದೆ. ಮುಂದಿನ ವರ್ಷದ ವೇಳೆಗೆ ಈ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಹೇಳಿದರು.

ಪಾವಗಡ ತಾಲ್ಲೂಕು ತಿರುಮಣಿಯಲ್ಲಿ ಅ. 31ಕ್ಕೆ ಬ್ಯಾಂಕ್ ಶಾಖೆ ಉದ್ಘಾಟನೆ ಆಗಲಿದ್ದು, ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ, ಕುಣಿಗಲ್ ತಾಲ್ಲೂಕಿನ ಅಮೃತೂರಿನಲ್ಲಿ ಶಾಖೆ ತೆರೆಯುವಂತೆ ಬೇಡಿಕೆ ಬಂದಿದೆ. ಸಮೀಕ್ಷೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ನಿರ್ದೇಶಕ ನಾರಾಯಣಗೌಡ, ಸಿಇಒ ಜಂಗಮಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.