ತುಮಕೂರಿನ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ‘ಕಾಪ್ ಕನೆಕ್ಟ್ ಕೆಫೆ’ ಆರಂಭಿಸುವ ಒಡಂಬಡಿಕೆಗೆ ಶನಿವಾರ ಸಾಹೇ ವಿಶ್ವವಿದ್ಯಾಲಯ ಕುಲಾಧಿಪತಿ ಜಿ.ಪರಮೇಶ್ವರ ಹಾಗೂ ಐಎಸ್‍ಎಸಿ ಫೌಂಡೇಶನ್ ನಿರ್ದೇಶಕ ಕ್ಯಾಪ್ಟನ್ ಪಿ.ಆನಂದ್‌ನಾಯ್ಡು ಸಹಿ ಹಾಕಿ, ಪರಸ್ಪರ ವಿನಿಮಯ ಮಾಡಿಕೊಂಡರು.
ತುಮಕೂರು: ಹೆಚ್ಚುತ್ತಿರುವ ಸೈಬರ್ ವಂಚನೆಯಿಂದ ಜನರನ್ನು ರಕ್ಷಿಸುವ, ಭದ್ರತೆ ಒದಗಿಸುವ ಸಂಬಂಧ ಸಿದ್ಧಾರ್ಥ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೆಂಗಳೂರಿನ ಐಎಸ್‍ಎಸಿ ಫೌಂಡೇಶನ್ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದವು.
ನಗರದ ಎಸ್‍ಎಸ್‍ಐಟಿ ಆವರಣದಲ್ಲಿ ಸೈಬರ್ ಅಪರಾಧ ಸಂತ್ರಸ್ತರಿಗೆ ಸಹಾಯ ಮಾಡಲು ಮತ್ತು ಸೈಬರ್ ಭದ್ರತೆಗೆ ‘ಕಾಪ್ ಕನೆಕ್ಟ್ ಕೆಫೆ’ ಆರಂಭಿಸುವ ಒಡಂಬಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಾಹೇ ವಿಶ್ವವಿದ್ಯಾಲಯ ಕುಲಾಧಿಪತಿ ಜಿ.ಪರಮೇಶ್ವರ ಮತ್ತು ಐಎಸ್‍ಎಸಿ ಫೌಂಡೇಶನ್ ನಿರ್ದೇಶಕ ಕ್ಯಾಪ್ಟನ್ ಪಿ.ಆನಂದ್‌ನಾಯ್ಡು ಶನಿವಾರ ಸಹಿ ಹಾಕಿ, ಪರಸ್ಪರ ವಿನಿಮಯ ಮಾಡಿಕೊಂಡರು.
‘ಆನ್‍ಲೈನ್ ಬೆದರಿಕೆಗಳನ್ನು ಎದುರಿಸಲು ಅಗತ್ಯವಿರುವ ಜ್ಞಾನ, ತರಬೇತಿ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಅಧಿಕಾರ ನೀಡುವ ಮೂಲಕ ಸೈಬರ್ ಸೆಕ್ಯೂರಿಟಿ ನೆಟ್‍ವರ್ಕ್ ಅಭಿವೃದ್ಧಿ ಪಡಿಸುವ ಗುರಿ ಇದೆ. ಇದರಿಂದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ನೆರವಾಗಲಿದೆ’ ಎಂದು ಪರಮೇಶ್ವರ ತಿಳಿಸಿದರು.
ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ವಿಶೇಷವಾಗಿ ಸೈಬರ್ ಕ್ರೈಮ್‍ಗಳಿಗಾಗಿ ಪೊಲೀಸ್ ಠಾಣೆ ತೆರೆಯಲಾಗಿದೆ. ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲಾಗುವುದು. ಸಾರ್ವಜನಿಕರನ್ನು ವಂಚಿಸುತ್ತಿರುವ ಜಾಲವನ್ನು ಹತೋಟಿಗೆ ತರಲು ಶೀಘ್ರವೇ ರಾಜ್ಯದಲ್ಲಿ ಎಡಿಜಿಪಿ ರ್‍ಯಾಂಕ್‌ನ ಅಧಿಕಾರಿ ನೇಮಕ ಮಾಡಲಾಗುವುದು. ಈಗಾಗಲೇ ನೇಮಕಾತಿ ಆರಂಭಿಸಲಾಗಿದೆ ಎಂದರು.
ಕ್ಯಾಪ್ಟನ್ ಪಿ.ಆನಂದ್‌ನಾಯ್ಡು, ‘ಕೆಫೆ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. 100 ಜನರನ್ನು ತರಬೇತಿಗಾಗಿ ಗುರುತಿಸಲಾಗಿದೆ. ಪ್ರಾಧ್ಯಾಪಕರ ಪ್ರಗತಿ ಮತ್ತು ಎಐಸಿಟಿಇ ಅನುಮೋದಿತ ಪ್ರಕ್ರಿಯೆಗಳ ಮೂಲಕ ಕಾರ್ಯಪಡೆ ಸೃಷ್ಟಿಸಲಾಗುತ್ತದೆ’ ಎಂದು ಹೇಳಿದರು.
ಸಾಹೇ ವಿ.ವಿ ರಿಜಿಸ್ಟ್ರಾರ್ ಎಂ.ಝೆಡ್.ಕುರಿಯನ್, ಕುಲಾಧಿಪತಿ ಸಲಹೆಗಾರ ವಿವೇಕ್ ವೀರಯ್ಯ, ಎಸ್‌ಎಸ್‌ಐಟಿ ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ್, ಡೀನ್ ರೇಣುಕಾ ಲತಾ, ಐಎಸ್‍ಎಸಿ ಫೌಂಡೇಶನ್‌ನ ಕೈಲಾಸ್, ವಿನಯ್, ವಿಶಾಲ್ ಮೊದಲಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.