ತುಮಕೂರು: ಕೊಬ್ಬರಿ ಧಾರಣೆಯು ವಾರದಿಂದ ವಾರಕ್ಕೆ ಹೆಚ್ಚಳವಾಗುತ್ತಿದ್ದು, ಗುರುವಾರ ತಿಪಟೂರು ಎಪಿಎಂಸಿಯಲ್ಲಿ ಕ್ವಿಂಟಲ್ ದರವು ₹17 ಸಾವಿರ ದಾಟಿದೆ.
ಈ ವರ್ಷ ದಾಖಲಾದ ಗರಿಷ್ಠ ಬೆಲೆ ಇದಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕ್ವಿಂಟಲ್‌ಗೆ ₹17 ಸಾವಿರಕ್ಕೆ ಮಾರಾಟವಾಗಿತ್ತು. ಆರು ತಿಂಗಳ ನಂತರ ಬೆಲೆ ಮತ್ತಷ್ಟು ಚೇತರಿಸಿಕೊಂಡಿದೆ.
ಮಾರುಕಟ್ಟೆಯಲ್ಲಿ ಗುರುವಾರ ಕನಿಷ್ಠ ₹14,900 ಮತ್ತು ಗರಿಷ್ಠ ₹17,100 ಬೆಲೆಗೆ ಮಾರಾಟವಾಯಿತು. 2,397 ಕ್ವಿಂಟಲ್ (5,577 ಚೀಲ) ಆವಕವಾಗಿತ್ತು. ಬೇಡಿಕೆಯಷ್ಟು ಕೊಬ್ಬರಿ ಮಾರುಕಟ್ಟೆಗೆ ಬಾರದಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಹಬ್ಬದ ಸಮಯದಲ್ಲಿ ಬೇಡಿಕೆಯೂ ಹೆಚ್ಚಾಗಿದೆ.
ಆರು ತಿಂಗಳ ಹಿಂದೆ ಕ್ವಿಂಟಲ್‌ಗೆ ಗರಿಷ್ಠ ₹17 ಸಾವಿರಕ್ಕೆ ಏರಿಕೆಯಾಗಿತ್ತು. ನಂತರ ಸ್ವಲ್ಪಮಟ್ಟಿಗೆ ಇಳಿಕೆಯಾಗಿ, ₹14 ಸಾವಿರದ ಆಸುಪಾಸಿನಲ್ಲೇ ಇತ್ತು. ಕಳೆದ ಕೆಲ ದಿನಗಳಿಂದ ನಿಧಾನವಾಗಿ ಬೆಲೆ ಏರಿಕೆಯತ್ತ ಮುಖ ಮಾಡಿದೆ.
ಮಾರ್ಚ್ 13ರ ಹರಾಜಿನಲ್ಲಿ ₹14 ಸಾವಿರ ದಾಟಿತ್ತು. ಮಾರ್ಚ್ 17ರಂದು ₹16 ಸಾವಿರ ತಲುಪಿತ್ತು. ಮೂರು ದಿನಗಳ ಅಂತರದಲ್ಲಿ ಕ್ವಿಂಟಲ್‌ಗೆ ₹1 ಸಾವಿರ ದರ ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.