ADVERTISEMENT

ಕೋವಿಡ್‌ಗೆ ಮನೋಸ್ಥೈರ್ಯವೊಂದೇ ಮದ್ದು: ಪಿ. ಚಂದ್ರಾ

ಕೊರೊನಾ ಸೋಂಕಿನಿಂದ ಗುಣಮುಖ

ಅಭಿಲಾಷ ಬಿ.ಸಿ.
Published 5 ಆಗಸ್ಟ್ 2020, 9:13 IST
Last Updated 5 ಆಗಸ್ಟ್ 2020, 9:13 IST
ಚಂದ್ರಾ
ಚಂದ್ರಾ   

ತುಮಕೂರು: ‘ನನಗೆ ಕೋವಿಡ್–19 ಯಾವ ಲಕ್ಷಣಗಳೂ ಇರಲಿಲ್ಲ. ಸಹಜವಾಗಿಯೇ ಇದ್ದೆ. ಮನೆಯಲ್ಲಿರುವ ಬದಲು ಆಸ್ಪತ್ರೆಯಲ್ಲಿದ್ದೆ. ಯಾವ ಔಷಧದ ಅಗತ್ಯವೂ ಇಲ್ಲದೆ ಒಂದು ವಾರದಲ್ಲಿ ನೆಗೆಟಿವ್ ವರದಿ ಬಂದಿತು. ಹತ್ತೇ ದಿನದಲ್ಲಿ ಮನೆಗೆ ಹಿಂತಿರುಗಿದೆ.

–ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಜಿಲ್ಲಾ ಕೋವಿಡ್‌ ಆಸ್ಪತ್ರೆಯ ಶುಶ್ರೂಷಕಿ ಪಿ.ಚಂದ್ರಾ ಅವರ ಮಾತಿದು.

ನಾಲ್ಕು ತಿಂಗಳಿನಿಂದ ಕೋವಿಡ್‌ ರೋಗಿಗಳೊಂದಿಗೆ ಒಡನಾಟದಲ್ಲಿದ್ದ ಚಂದ್ರಾ ಅವರು ಸೋಂಕಿನ ಯಾವುದೇ ಲಕ್ಷಣ ಇಲ್ಲದಿದ್ದರೂ ಒಮ್ಮೆ ಪರೀಕ್ಷೆ ಮಾಡಿಸೋಣ ಎಂದು ಜೂನ್ 30ರಂದು ಗಂಟಲು ದ್ರವವನ್ನು ಪರೀಕ್ಷೆ ನೀಡಿದ್ದರು. ಜುಲೈ 2ರಂದು ಸೋಂಕು ತಗುಲಿರುವುದು ದೃಢವಾಗಿತ್ತು.

ADVERTISEMENT

‘ಎಷ್ಟೇ ಧೈರ್ಯವಾಗಿದ್ದರೂ ಸೋಂಕು ದೃಢವಾದಾಗ ಒಂದು ಕ್ಷಣ ವಿಚಲಿತಳಾಗಿದ್ದೆ. ಮರುಕ್ಷಣವೇ ಸಹಜಸ್ಥಿತಿಗೆ ಬಂದೆ. ಕೋವಿಡ್‌, ಔಷಧಿ ಇಲ್ಲದೆಯೇ ಗುಣವಾಗುವ ಬಹಳ ಸಾಮಾನ್ಯ ಸೋಂಕು. ಇದಕ್ಕೆ ಮನೋಸ್ಥೈರ್ಯವೊಂದೇ ಮದ್ದು’ ಎನ್ನುತ್ತಾರೆ.

ಕೊರೊನಾ ಒಂದು ಸಾಮಾಜಿಕ ಕಳಂಕದಂತೆ ಆಗಿದೆ. ಹೆದರಿಕೆಯಿಂದಲೇ ಜನರಿಗೆ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಕೊರೊನಾ ಸೋಂಕು ಚಳಿ, ಜ್ವರಕ್ಕಿಂತಲೂ ತೀರಾ ಸಾಮಾನ್ಯ ರೋಗ.ಡೆಂಗಿ ಬಂದಾಗ ಬಳಿರಕ್ತಕಣಗಳ (ಪ್ಲೇಟ್‌ಲೆಟ್‌) ಪ್ರಮಾಣ ಗಣನೀಯವಾಗಿ ಕಡಿಮೆ ಆಗುತ್ತದೆ. ಅವರಿಗೆ ಪ್ಲೇಟ್‌ಲೆಟ್‌ ನೀಡಬೇಕು. ಆದರೆ ಕೋವಿಡ್‌ಗೆ ಅಂತಹ ಯಾವುದೇ ಚಿಕಿತ್ಸೆ ಅಗತ್ಯವೇ ಇಲ್ಲ. ಚೆನ್ನಾಗಿ ಊಟ ಮಾಡಿ, ವಿಶ್ರಾಂತಿ ಪಡೆದರೆ ಸಾಕು ಎನ್ನುವುದು ಅವರ ಅನುಭವದ ನುಡಿ.

‘ನನಗೆ ಸೋಂಕು ದೃಢವಾದಾಗ ಮನೆಯನ್ನು ಸೀಲ್‌ಡೌನ್‌ ಮಾಡುವಾಗ ಸ್ವಲ್ಪ ಹಿಂಜರಿಕೆ ಆಗಿತ್ತು. ಭಯೋತ್ಪಾದಕರೊ, ದರೋಡೆ ಮಾಡಿದ್ದೇವು ಅಥವಾ ಬರಬಾರದ ಯಾವುದೊ ಕಾಯಿಲೆ ಬಂದಿದೆಯೋ ಎಂಬಂತೆ ಅನಿಸಿತ್ತು. ಮನೆಯಲ್ಲಿ ಗಂಡ ಹಾಗೂ ಮಗನಿಗೆ ಸೋಂಕು ತಗುಲಿರಲಿಲ್ಲ. ನನಗೆ ಮಾತ್ರ ಸೋಂಕು ಇತ್ತು. ನಾನು ಆಸ್ಪತ್ರೆಯಲ್ಲಿ ಇದ್ದೆ. ಮನೆ ಸೀಲ್‌ಡೌನ್ ಮಾಡುವುದು ಅನಗತ್ಯ ಎನಿಸಿತ್ತು. 14 ದಿನ ಸೀಲ್‌ಡೌನ್‌ ಮಾಡಿದ್ದರು. ಆದರೆ ಅದು ಅವೈಜ್ಞಾನಿಕ’ ಎಂದರು.

ಬೇಸರ ತರಿಸುವ ಜನರ ವರ್ತನೆ
ಜನರ ವರ್ತನೆ ಕೆಲವೊಮ್ಮೆ ಬೇಸರ ತರಿಸುತ್ತದೆ. ವಿಚಿತ್ರವಾಗಿ ನೋಡುತ್ತಾರೆ. ಇದರಿಂದ ಆತ್ಮವಿಶ್ವಾಸ ಕುಗ್ಗುತ್ತದೆ. ಜನರ ಆರೋಗ್ಯಕ್ಕಾಗಿಯೇ ನಾಲ್ಕು ತಿಂಗಳಿನಿಂದ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಸಮುದಾಯದ ಸಹಕಾರ, ಸಹಭಾಗಿತ್ವ ಅಗತ್ಯ ಎನ್ನುತ್ತಾರೆ ಚಂದ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.