ADVERTISEMENT

ತುಮಕೂರು: 500 ದಾಟಿದ ಕೊರೊನಾ ಸೋಂಕಿತರ ಸಂಖ್ಯೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 18:16 IST
Last Updated 13 ಜುಲೈ 2020, 18:16 IST
ಕೊರೊನಾ ವೈರಸ್
ಕೊರೊನಾ ವೈರಸ್    

ತುಮಕೂರು: ಜಿಲ್ಲೆಯಲ್ಲಿ ಸೋಮವಾರ ಮತ್ತೆ 35 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ ಮಹಿಳೆಯೊಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ 15ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 512ಕ್ಕೆ ಹೆಚ್ಚಿದೆ.

ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲೇ 31 ಪ್ರಕರಣಗಳು ಕಂಡು ಬಂದಿವೆ. ಸದಾಶಿವನಗರದ 58 ವರ್ಷದ ಮಹಿಳೆ ಜುಲೈ 10ರಂದು ಭೇದಿಯಿಂದ ಮೃತಪಟ್ಟಿದ್ದರು. ಅವರ ಗಂಟಲು ದ್ರವವನ್ನು 11ರಂದು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ವರದಿ ಬಂದಿದ್ದು ಕೋವಿಡ್ ದೃಢಪಟ್ಟಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಗುಣಮುಖರಾಗಿ ಬಿಡುಗಡೆಯಾದರು. ಇಲ್ಲಿಯವರೆಗೂ 137 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 361 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇವೆ.

ADVERTISEMENT

ಕೊರೊನಾ ಸೋಂಕು ನಗರದಲ್ಲಿ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಪ್ರವಾಸಿ ಮಂದಿರಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಆರೋಗ್ಯವಾಗಿರುವ ತಾಯಿ-ಮಗು

ಕೊರಟಗೆರೆ ತಾಲ್ಲೂಕಿನ 20 ವರ್ಷದ ಕೊರೊನಾ ಸೋಂಕಿತ ಗರ್ಭಿಣಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಹೆರಿಗೆ ಆಯಿತು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ತಿಳಿಸಿದ್ದಾರೆ.

ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಯಿತು. ಹೆಣ್ಣು ಮಗು ಜನನವಾಗಿದ್ದು, ಆರೋಗ್ಯವಾಗಿದೆ. ಸ್ತ್ರೀರೋಗ ತಜ್ಞೆ ಡಾ.ಮಹಾಲಕ್ಷ್ಮಮ್ಮ, ಅರಿವಳಿಕೆ ತಜ್ಞ ಡಾ.ಸುರೇಶಬಾಬು ಮತ್ತು ತಂಡದವರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇದು ಮೊದಲ ಕೋವಿಡ್-19 ಸೋಂಕಿತ ಗರ್ಭಿಣಿಗೆ ಮಾಡಿದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಎಂದು ಹೇಳಿದ್ದಾರೆ.

ತಾಲ್ಲೂಕು; ಇಂದಿನ ಸೋಂಕಿತರು(ಜು.13); ಒಟ್ಟು ಸೋಂಕಿತರು; ಮರಣ
ಚಿ.ನಾ.ಹಳ್ಳಿ; 0 ;28 ;0
ಗುಬ್ಬಿ; 2 ;30 ;0
ಕೊರಟಗೆರೆ; 0 ;34 ;1
ಕುಣಿಗಲ್; 1 ;27 ;1
ಮಧುಗಿರಿ; 0 ;44 ;1
ಪಾವಗಡ; 0 ;57 ;0
ಶಿರಾ; 1 ;51 ;1
ತಿಪಟೂರು; 0 ;18 ;0
ತುಮಕೂರು; 31 ;207 ;11
ತುರುವೇಕೆರೆ; 0 ;17 ;0
ಒಟ್ಟು; 35 ;512 ;15

ತುಮಕೂರಿನ ಎಲ್ಲೆಲ್ಲಿ ಕೊರೊನಾ

ತುಮಕೂರಿನ ಎಸ್‌ಐಟಿ ಬಡಾವಣೆ, ಎಸ್‌ಐಟಿ 16ನೇ, 8ನೇ ಕ್ರಾಸ್, ಅಶೋಕ್ ನಗರ 9ನೇ ಕ್ರಾಸ್, ಬಾರ್‌ಲೈನ್ ರಸ್ತೆ, ಹೊಸಬಡಾವಣೆ, ಶಿರಾಗೇಟ್‌ನ ಸಿ.ವಿ.ಪಾಳ್ಯ, ಅಗಳಕೋಟೆ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಪಿ.ಜಿ.ಬಡಾವಣೆ ಎರಡನೇ ಕ್ರಾಸ್, ವಿನೋಬನಗರ, ವಾಲ್ಮೀಕಿ ನಗರ, ನೃಪತುಂಗ ಬಡಾವಣೆ, ಚಿಲುಮೆ ಐಬಿ, ಕೃಷ್ಣ ನಗರ, ಸದಾಶಿವನಗರ, ಸಿದ್ಧರಾಮೇಶ್ವರ ಬಡಾವಣೆ, ಮರಳೂರು ದಿಣ್ಣೆ, ಶಿರಾಗೇಟ್‌, ಕ್ಯಾತ್ಸಂದ್ರದ ಕೇರಳಾಪುರ, ಇಂದಿರಾನಗರ, ಬೆಳ್ಳಾವಿಯ ಟಿ.ಗೊಲ್ಲಹಳ್ಳಿ, ಊರುಕೆರೆ, ಹೆಗ್ಗೆರೆ, ಹಿರೇಹಳ್ಳಿಯಲ್ಲಿ ಸೋಮವಾರ ಸೋಂಕಿತರು ಕಂಡು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.