ADVERTISEMENT

ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸ್ಫೋಟ, ಒಂದೇ ದಿನ 15 ಸೋಂಕು ಪ್ರಕರಣ

ಮೊದಲ ಬಾರಿ ಗರಿಷ್ಠ ಪ್ರಕರಣ; ಒಂದೇ ದಿನ 15 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 15:17 IST
Last Updated 26 ಜೂನ್ 2020, 15:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲೆಯಲ್ಲಿ ಮೊದಲ ಬಾರಿ ಕೊರೊನಾ ಸೋಂಕಿನ ‘ಸ್ಫೋಟ’ ಎನ್ನುವಂತೆ ಶುಕ್ರವಾರ ಒಂದೇ ದಿನ 15 ಮಂದಿಗೆ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಈ ಪ್ರಮಾಣದಲ್ಲಿ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿರುವುದು ಇದೇ ಮೊದಲು. ಈ ಎಲ್ಲ ರೋಗಿಗಳಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮೂಲಕ ಜಿಲ್ಲೆಯಲ್ಲಿ ಮತ್ತಷ್ಟು ಸೋಂಕು ಹರಡುವುದು ದಟ್ಟವಾಗಿದೆ. ಪ್ರಮುಖವಾಗಿ ಶುಕ್ರವಾರ ಪತ್ತೆಯಾಗಿರುವ ಸೋಂಕಿನ ಪ್ರಕರಣ ಇಡೀ ಜಿಲ್ಲೆಯನ್ನೇ ವ್ಯಾಪಿಸಿದೆ. ತುರುವೇಕೆರೆ, ಕುಣಿಗಲ್, ಕೊರಟಗೆರೆ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಪತ್ತೆಯಾಗಿವೆ. ಇಷ್ಟೊಂದು ಪ್ರಮಾಣ ಮತ್ತು ಎಲ್ಲೆಡೆ ಸೋಂಕು ಪತ್ತೆಯಾಗಿರುವುದು ಜನರಲ್ಲಿ ಆತಂಕವನ್ನು ತೀವ್ರವಾಗಿಯೇ ಹೆಚ್ಚಿಸಿದೆ.

ಮಧುಗಿರಿಯ ಕೆ.ಆರ್.ಬಡಾವಣೆಯ 37 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ವ್ಯಕ್ತಿ ವೃತ್ತಿಯಲ್ಲಿ ಕಾರು ಚಾಲಕರಾಗಿದ್ದಾರೆ.ಇತ್ತೀಚೆಗೆ ತುಮಕೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿ ಮಧುಗಿರಿಯಲ್ಲಿ ಬಟ್ಟೆ ಹೊಲಿಯುವ ಅಂಗಡಿ ನಡೆಸುತ್ತಿದ್ದರು. ತನ್ನ ಕಾರಿನ ಮಾಲೀಕರ ಬಟ್ಟೆಗಳನ್ನು ತೆಗೆದುಕೊಂಡು ಬರಲು ಹೋಗಿದ್ದ ವೇಳೆ ಇವರಿಗೆ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಸೋಂಕಿತ ವಾಸವಿದ್ದ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

ADVERTISEMENT

ತುಮಕೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 30 ಮತ್ತು 58 ವರ್ಷದ ಪುರುಷರಿಗೆ ಸೋಂಕು ಪತ್ತೆಯಾಗಿದೆ. ಈ ಇಬ್ಬರು ಅಪ್ಪ ಮಕ್ಕಳಾಗಿದ್ದಾರೆ. ಜೂನ್ 24ರಂದು ಈ ಇಬ್ಬರು ಬೆಂಗಳೂರಿನ ಕಾಮಾಕ್ಷಿಪಾಳ್ಯದಿಂದ ಸ್ವಗ್ರಾಮಕ್ಕೆ ಬಂದಿದ್ದಾರೆ. ಇವರ ಸಂಪರ್ಕಿತರನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ತುಮಕೂರು ಗ್ರಾಮಾಂತರದ 31 ವರ್ಷದ ವ್ಯಕ್ತಿ ಮತ್ತು 11 ವರ್ಷದ ಯುವಕನಿಗೆ ಸೋಂಕು ತಗುಲಿದೆ.

ವಿದ್ಯಾರ್ಥಿ ತಂದೆಗೂ ಸೋಂಕು: ಸೋಂಕಿಗೆ ತುತ್ತಾಗಿದ್ದ ಶಿರಾ ತಾಲ್ಲೂಕಿನ ಕಾಮಗೊಂಡನಹಳ್ಳಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ತಂದೆಗೂ ಕೊರೊನಾ ದೃಢವಾಗಿದೆ. ಇವರು ತಮ್ಮ ಪತ್ನಿಯ ತವರು ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನಿಂದ ಮಗನ ಜತೆ ಶಿರಾಕ್ಕೆ ಬಂದಿದ್ದರು. ಇವರ ಪತ್ನಿಗೆ ಈಗಾಗಲೇ ಸೋಂಕು ದೃಢವಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 5 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಗುಬ್ಬಿಯಲ್ಲಿ ಶುಕ್ರವಾರ ಮೂರನೇ ಪ್ರಕರಣ ಪತ್ತೆಯಾಗಿದೆ. 48 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ.

ರಾಜಸ್ಥಾನದಿಂದ ಬಂದವರಿಗೆ ಸೋಂಕು: ಶಿರಾ ತಾಲ್ಲೂಕಿನ ರಾಜಸ್ಥಾನದಿಂದ ಬಂದ 36 ವರ್ಷದ ಮಹಿಳೆಯಲ್ಲೂ ಕೊರೊನಾ ಪತ್ತೆಯಾಗಿದೆ. ರಾಜಸ್ಥಾನದಿಂದ ಬಂದ ಇವರನ್ನು ಅಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಗಂಟಲು ಸ್ರಾವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಶಿರಾದ 55 ವರ್ಷದ ವ್ಯಕ್ತಿಯೂ ಕೊರೊನಾ ಹಿಡಿತಕ್ಕೆ ಸಿಲುಕಿದ್ದಾರೆ.

ಎಂಜಿನಿಯರ್‌ಗೆ ಕೊರೊನಾ: ಚಿಕ್ಕನಾಯಕನಹಳ್ಳಿ ಹೊರ ವಲಯದ ಕಾಡೇನಹಳ್ಳಿಯ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಲ್ಲಿ ಕೊರೊನಾ ಪತ್ತೆಯಾಗಿದೆ. ಇವರು ತಿಪಟೂರು ತಾಲ್ಲೂಕಿನ ಕೋಟನಾಯಕನಹಳ್ಳಿಯಲ್ಲಿದ್ದು, ನಂತರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಡೇನಹಳ್ಳಿಯಲ್ಲಿ ಇವರ ಮನೆಯ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಗ್ರಾಮವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಇವರ ಮನೆಯಲ್ಲಿದ್ದ ನಾಲ್ಕು ಜನರ ಗಂಟಲು ಸ್ರಾವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಪೌರಕಾರ್ಮಿಕರಿಗೆ ಸೋಂಕು: ತಿಪಟೂರಿನ ಸ್ವೀಪರ್ಸ್ ಕಾಲೊನಿಯಲ್ಲಿ ವಾಸವಾಗಿದ್ದ 40 ವರ್ಷದ ಪೌರಕಾರ್ಮಿಕರಲ್ಲಿ ಸೋಂಕು ಕಂಡು ಬಂದಿದೆ. ಈ ಕಾಲೊನಿಯನ್ನು ಸ್ಯಾನಿಟೈಸ್ ಮಾಡಲಾಗಿದೆ.

ಪರೀಕ್ಷಾ ವೀಕ್ಷಕನಿಗೆ ಸೋಂಕು: ಪಾವಗಡ ತಾಲ್ಲೂಕಿನಲ್ಲಿ ನಾಲ್ಕು ಮಂದಿಗೆ ಸೋಂಕು ತಗುಲಿದೆ. ಮದ್ದಿಬಂಡೆಯ 45 ವರ್ಷದ ವ್ಯಕ್ತಿ, ಪಟ್ಟಣದ ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ತಾಲ್ಲೂಕು ಮಟ್ಟದ ಅಧಿಕಾರಿ, ವಿನಾಯಕನಗರದ 29 ವರ್ಷದ ವ್ಯಕ್ತಿ, ಶಾಂತಿನಗರದ 42 ವಯಸ್ಸಿನ ಮತ್ತೊಬ್ಬರು ಅಧಿಕಾರಿಯಲ್ಲಿ ಸೋಂಕು ಪತ್ತೆಯಾಗಿದೆ.

ಇವರಲ್ಲಿ ಅಧಿಕಾರಿಯು ಅರಸೀಕೆರೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ವೀಕ್ಷಕರಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಶುಕ್ರವಾರತುಮಕೂರು ಗ್ರಾಮಾಂತರದಲ್ಲಿ4,ಮಧುಗಿರಿ 1,ಶಿರಾ 3,ಗುಬ್ಬಿ 1,ಪಾವಗಡ 4,ತಿಪಟೂರು 1 ಮತ್ತುಚಿಕ್ಕನಾಯಕನಹಳ್ಳಿಯಲ್ಲಿ ಒಂದು ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿದೆ.

ಪತ್ತೆ ಹೆಚ್ಚುವುದೇ ಸವಾಲು

ಸೋಂಕಿತರ ಜತೆ ಯಾರು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಇದ್ದರು ಎನ್ನುವುದನ್ನು ಪತ್ತೆ ಮಾಡುವುದೇ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸವಾಲಾಗಿದೆ. ಶುಕ್ರವಾರ ಪತ್ತೆಯಾದ ಬಹುತೇಕ ಪ್ರಕರಣಗಳಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರೇ ಪತ್ತೆಯಾಗಿಲ್ಲ! ಅವರನ್ನು ಪತ್ತೆ ಹೆಚ್ಚುವ ವೇಳೆಗೆ ಮತ್ತಷ್ಟು ಸೋಂಕು ಹೆಚ್ಚಬಹುದು ಎನ್ನುವ ಆತಂಕ ತೀವ್ರವಾಗುತ್ತಿದೆ.

ಇನ್ನೂ ಬಾಕಿ ಇದೆ 1,223 ವರದಿಗಳು

ಜಿಲ್ಲೆಯಲ್ಲಿ ಸೋಂಕು ಹೆಚ್ಚುತ್ತಿರುವುದರ ನಡುವೆಯೇ ಮತ್ತಷ್ಟು ಮಂದಿಗೆ ತಗಲಿರುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಗಂಟಲು ಸ್ರಾವ ಮತ್ತು ಕಫದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹೀಗೆ ಪರೀಕ್ಷೆಗೆ ಸಂಗ್ರಹಿಸಿರುವ 1,223 ಮಾದರಿಗಳ ವರದಿಗಳು ಇನ್ನೂ ಬಂದಿಲ್ಲ. ಈ ವರದಿಗಳಲ್ಲಿಯೂ ಸೋಂಕಿನ ಪ್ರಕರಣಗಳು ಪತ್ತೆಯಾಗುವುದು ಖಚಿತ ಎಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸುತ್ತವೆ. ಈಗಾಗಲೇ ಗ್ರಾಮೀಣ ಭಾಗಗಳಿಗೂ ಕೊರೊನಾ ಪಸರಿಸಿದೆ. ಇದು ವ್ಯಾಪಕವಾಗುವ ಲಕ್ಷಣಗಳು ದಟ್ಟವಾಗಿವೆ.

ಸೀಲ್‌ಡೌನ್

ತುಮಕೂರಿನ ಅಮರಜ್ಯೋತಿ ನಗರದಲ್ಲಿ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಕೆಂಪೇಗೌಡ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಈ ರಸ್ತೆಯನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಮತ್ತು ಅವರ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೆ ಕಂಟೈನ್‌ಮೆಂಟ್ ವಲಯವನ್ನಾಗಿಸಲಾಗಿದೆ.

ಕ್ವಾರಂಟೈನ್ ಅವ್ಯವಸ್ಥೆಯಿಂದ ಸೋಂಕು

ಕ್ವಾರಂಟೈನ್ ಕೇಂದ್ರದಲ್ಲಿನ ಅವ್ಯವಸ್ಥೆಯೇ ತಿಪಟೂರಿನಲ್ಲಿ ಪೌರಕಾರ್ಮಿಕರಿಗೆ ಸೋಂಕು ತಗುಲಲು ಕಾರಣ ಎನ್ನಲಾಗುತ್ತಿದೆ.ಈ ಕ್ವಾರಂಟೈನ್ ಕೇಂದ್ರದಲ್ಲಿ ಆಹಾರ ಪೂರೈಕೆ, ಯೋಗಕ್ಷೇಮ ಹಾಗೂ ನಿರ್ವಹಣೆಯ ವ್ಯವಸ್ಥೆಯನ್ನು ಈ ಪೌರಕಾರ್ಮಿಕರು ನೋಡಿಕೊಳ್ಳುತ್ತಿದ್ದರು. ಆದರೆ ಅವರಿಗೆ ಯಾವುದೇ ರೀತಿಯ ಸುರಕ್ಷಾ ಸಾಧನಗಳನ್ನು ನೀಡಿರಲಿಲ್ಲ. ಈ ಕಾರಣದಿಂದಲೇ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಕೊರೊನಾ ವಾರಿಯರ್ಸ್ ರೀತಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಆತ್ಮಸ್ಥೈರ್ಯವನ್ನು ಇದು ಕುಗ್ಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.