ತುಮಕೂರಿನಲ್ಲಿ ಭಾನುವಾರ ಮುಕ್ತಾಯವಾದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ದಕ್ಷಿಣ ಕನ್ನಡ ತಂಡದ ಆಟಗಾರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪ್ರಶಸ್ತಿ ವಿತರಿಸಿದರು.
ತುಮಕೂರು: ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯ ಬಾಲಕರ ಮತ್ತು ಬಾಲಕಿಯರ ವಿಭಾಗಗಳ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆಶ್ರಯದಲ್ಲಿ ನಡೆದ ಎರಡು ದಿನಗಳ ಟೂರ್ನಿಯಲ್ಲಿ 30 ಜಿಲ್ಲೆಗಳಿಂದ ಒಟ್ಟು 66 ತಂಡಗಳು ಭಾಗವಹಿಸಿದ್ದವು.
ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವಯ 36–26 ಅಂಕಗಳಿಂದ ವಿಜಯಪುರ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ವಿಜಯಪುರ ರನ್ನರ್ಸ್ ಅಪ್ ಆಯಿತು.
ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿ ಮತ್ತು ದಕ್ಷಿಣ ಕನ್ನಡ ತಂಡಗಳ ಮಧ್ಯೆ ಪ್ರಶಸ್ತಿಗೆ ಪೈಪೋಟಿ ಏರ್ಪಟ್ಟಿತ್ತು. ರೋಚಕವಾಗಿದ್ದ ಈ ಪಂದ್ಯವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ದಕ್ಷಿಣ ಕನ್ನಡದ ಬಾಲಕಿಯರು 46–44ರಿಂದ ಚಿಕ್ಕೋಡಿ ತಂಡವನ್ನು ಸೋಲಿಸಿ ಸಂಭ್ರಮಿಸಿದರು.
ಬಾಲಕರಲ್ಲಿ ಉತ್ತಮ ರೇಡರ್ ಸಂದೀಪ್ (ವಿಜಯಪುರ), ಉತ್ತಮ ಡಿಫೆಂಡರ್ ಆನಂದ್ (ದಕ್ಷಿಣ ಕನ್ನಡ), ಉತ್ತಮ ಆಲ್‌ರೌಂಡರ್ ಸಯೀಮ್ (ಉಡುಪಿ), ಬಾಲಕಿಯರಲ್ಲಿ ಉತ್ತಮ ರೇಡರ್ ಹಂಷಿತಾ (ದಕ್ಷಿಣ ಕನ್ನಡ), ಉತ್ತಮ ಡಿಫೆಂಡರ್ ರುಕ್ಸಾನಾ (ಹಾವೇರಿ), ಉತ್ತಮ ಆಲ್‌ರೌಂಡರ್ ಸುರಕ್ಷಾ (ಚಿಕ್ಕೋಡಿ) ವೈಯಕ್ತಿಕ ಪ್ರಶಸ್ತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.