ADVERTISEMENT

ಪಟಾಕಿ, ಸ್ಫೋಟಕ ಬಳಕೆ ನಿಷೇಧ

ಸರ್ಕಾರದ ಮಾರ್ಗಸೂಚಿ ಅನ್ವಯ ಗಣೇಶೋತ್ಸವ; ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 16:19 IST
Last Updated 19 ಆಗಸ್ಟ್ 2020, 16:19 IST
ಡಾ.ಕೆ.ರಾಕೇಶ್ ಕುಮಾರ್
ಡಾ.ಕೆ.ರಾಕೇಶ್ ಕುಮಾರ್   

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಕಾರಣ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಗಣೇಶೋತ್ಸವ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಬುಧವಾರ ಸೂಚಿಸಿದರು.

ಗಣೇಶ ಮೂರ್ತಿ ತರುವಾಗ, ವಿಸರ್ಜಿಸುವಾಗ ಮೆರವಣಿಗೆ ನಡೆಸುವುದು, ಪಟಾಕಿ, ಸ್ಫೋಟಕ ಬಳಕೆ ನಿರ್ಬಂಧಿಸಿದೆ. ಗಣೇಶ ಚರ್ತುಥಿ ಆಚರಿಸುವ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸ್ ಮಾಡಬೇಕು. ಭಕ್ತರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಗಣೇಶೋತ್ಸವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ‘ಹಬ್ಬವನ್ನು ದೇವಸ್ಥಾನ, ಮನೆ, ಸರ್ಕಾರಿ, ಖಾಸಗಿ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬೇಕು. ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ, ಮನೆಗಳಲ್ಲಿ 2 ಅಡಿಗೆ ಮೀರದಂತೆ ಪ್ರತಿಷ್ಠಾಪಿಸಬೇಕು’ ಎಂದು ತಿಳಿಸಿದರು.

ADVERTISEMENT

ಪಾರಂಪರಿಕ ಗಣೇಶೋತ್ಸವಕ್ಕೆ ಸಮಿತಿಗಳು, ಮಂಡಳಿಗಳು ಮೂರ್ತಿ ಪ್ರತಿಷ್ಠಾಪಿಸಲು ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು. ಒಂದು ವಾರ್ಡ್ ಅಥವಾ ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವ ಆಚರಿಸಬೇಕು ಎಂದರು.

ಕಾರ್ಯಕ್ರಮದ ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣ ನಿರ್ಮಿಸಬೇಕು. 20ಕ್ಕಿಂತ ಹೆಚ್ಚಿನ ಜನ ಸೇರಬಾರದು. ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಇಲ್ಲ. ಈ ಬಗ್ಗೆ ಪೊಲೀಸ್, ಸಂಬಂಧಿಸಿದ ಇಲಾಖೆಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್, ಪಾಲಿಕೆ ಆಯುಕ್ತೆ ರೇಣುಕಾ, ಡಿವೈಎಸ್‍ಪಿ ತಿಪ್ಪೇಸ್ವಾಮಿ, ನಗರ ಯೋಜನಾ ನಿರ್ದೇಶಕ ರಂಗಸ್ವಾಮಿ, ಡಿಎಚ್‍ಓ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.